ನವದೆಹಲಿ: ದೇಶಾದ್ಯಂತ ಪ್ರವಾಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಪರ್ಮಿಟ್ ಗೆ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ಯಾವುದೇ ಪ್ರವಾಸಿ ವಾಹನಗಳ ಮಾಲೀಕರು ಆನ್ ಲೈನ್ ನಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಮೂರು ತಿಂಗಳಿನಿಂದ ಮೂರು ವರ್ಷದವರೆಗೆ ಅಖಿಲ ಭಾರತ ಪ್ರವಾಸ ಪರ್ಮಿಟ್ ಪಡೆಯುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಕುರಿತಾಗಿ ಪ್ರಕಟಣೆ ಹೊರಡಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಷ್ಟ್ರೀಯ ಪರ್ಮಿಟ್ ವ್ಯವಸ್ಥೆಗೆ ಬದಲಾವಣೆ ತರಲಾಗುವುದು. ಅಖಿಲ ಭಾರತ ಪ್ರವಾಸಿ ವಾಹನಗಳ ಪ್ರಮಾಣೀಕರಣ ಮತ್ತು ಪರ್ಮಿಟ್ ನಿಯಮಾವಳಿ 2020 ಜಾರಿಗೆ ತರಲಿದ್ದು ಹೊಸ ವ್ಯವಸ್ಥೆಯಲ್ಲಿ ಪ್ರವಾಸಿ ವಾಹನಗಳ ಮಾಲೀಕರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಬೇಕು.
3 ತಿಂಗಳು, 6, 9 ತಿಂಗಳು, 3 ವರ್ಷ ಹೀಗೆ ಪರ್ಮಿಟ್ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಯಾದ 30 ದಿನದೊಳಗೆ ಪರ್ಮಿಟ್ ಸಿಗಲಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಹೊಸ ವ್ಯವಸ್ಥೆ ಜಾರಿಗೆ ಬಂದರೂ ಕೂಡ ಹಳೆಯ ಪರ್ಮಿಟ್ ಗಳು ಅವುಗಳ ಕೊನೆಯ ದಿನಾಂಕದವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಹೇಳಲಾಗಿದೆ.