ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವಿದ್ಯುತ್ ಬಿಲ್ ಸ್ಕ್ಯಾನ್ ಮಾಡಿ ಹಣ ಪಾವತಿಸುವ ವಿಧಾನ ಜಾರಿಗೆ ತಂದಿದ್ದು, ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲು ಮುಂದಾಗಿದೆ.
ವಿದ್ಯುತ್ ಬಿಲ್ ನಲ್ಲಿ ಕ್ಯೂ ಆರ್ ಕೋಡ್ ವ್ಯವಸ್ಥೆ ಇರುವುದರಿಂದ ತಾವು ಇರುವ ಜಾಗದಲ್ಲಿಯೇ ಬಿಲ್ ಪಾವತಿಸುವ ಗ್ರಾಹಕ ಸ್ನೇಹಿ ಯೋಜನೆ ಇದಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯಾಪ್ತಿಯ ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಲು ಸುಧಾರಿತ ವಿಧಾನವಾದ ಕ್ಯೂಆರ್ ಕೋಡ್ ವಿಧಾನವನ್ನು ಅನುಸರಿಸಬಹುದು.
ಜನವರಿ 1 ರಿಂದ ಗ್ರಾಮಾಂತರ ಪ್ರದೇಶದಲ್ಲಿ ಮತ್ತು ಜನವರಿ ಮೊದಲ ವಾರದಿಂದ ನಗರ ವ್ಯಾಪ್ತಿಯಲ್ಲಿ ಈ ಯೋಜನೆ ಅನ್ವಯ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಬಹುದಾಗಿದ್ದು, ಬೆಂಗಳೂರಿನ ಶಕ್ತಿ ಭವನದಲ್ಲಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ಚಾಲನೆ ನೀಡಲಿದ್ದಾರೆ.
ಇದರಿಂದ ಮಾನವ ಹಸ್ತಕ್ಷೇಪ ಕಡಿಮೆಯಾಗಲಿದ್ದು, ಇನ್ಸ್ಟಂಟ್ ರಶೀದಿ ಸಿಗುತ್ತದೆ. ಕ್ಯೂಆರ್ ಕೋಡ್ ಬಳಸಿಕೊಂಡು ತಾವು ಇರುವ ಜಾಗದಲ್ಲಿಯೇ ಕ್ಷಣಾರ್ಧದಲ್ಲಿ ಬಿಲ್ ಪಾವತಿಸಬಹುದು. ಆನ್ಲೈನ್ ಬಿಲ್ ಪಾವತಿ ವಿಧಾನಕ್ಕಿಂತ ಸುಧಾರಿತ ವಿಧಾನ ಇದಾಗಿದ್ದು, ಮಾನವ ಸಂಪನ್ಮೂಲ ತಗ್ಗಿಸಬಹುದು. ದಾಖಲೀಕರಣಕ್ಕೆ ಅನುಕೂಲವಾಗುತ್ತದೆ. ಗ್ರಾಹಕ ಸ್ನೇಹಿ ಯೋಜನೆ ಇದಾಗಿದೆ ಎಂದು ಹೇಳಲಾಗಿದೆ.