ನವದೆಹಲಿ: ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡ ನೌಕರರ ರಾಜ್ಯ ವಿಮಾ ನಿಗಮದ(ಇಎಸ್ಐಸಿ) ಸದಸ್ಯರಿಗೆ ಕೇಂದ್ರ ಸರ್ಕಾರ ಮೂರು ತಿಂಗಳ ವೇತನವನ್ನು ನೀಡುತ್ತದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಶುಕ್ರವಾರ ಮಾಹಿತಿ ನೀಡಿದ್ದಾರೆ.
ಕೊರೋನಾದಿಂದ ಜೀವ ಕಳೆದುಕೊಂಡ ECSI ಸದಸ್ಯರ ಸಂಬಂಧಿಕರಿಗೆ ತಮ್ಮ ಸಚಿವಾಲಯವು ಆಜೀವ ಆರ್ಥಿಕ ಸಹಾಯವನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಾದವ್, ಪ್ರತಿ ರಾಜ್ಯದಲ್ಲಿಯೂ ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಕಾರ್ಮಿಕ ಕಾನೂನನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅನೇಕ ರಾಜ್ಯಗಳು ತಮ್ಮದೇ ಕಾನೂನುಗಳನ್ನು ಮಾಡಿಕೊಂಡಿವೆ. ಕಾರ್ಮಿಕರಿಗೆ ಸಂಬಂಧಿಸಿದ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳೊಂದಿಗೆ ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ.
ಇ-ಶ್ರಮ ಪೋರ್ಟಲ್ ಬಗ್ಗೆ, ಕೇಂದ್ರ ಸಚಿವರು ಮಾತನಾಡಿ, ಸುಮಾರು 400 ವರ್ಗಗಳ ಯಾವುದೇ ಕಾರ್ಮಿಕರು ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ನಿರ್ಮಾಣ ಕ್ಷೇತ್ರ, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮತ್ತು ಗೃಹ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದಲ್ಲಿ 38 ಕೋಟಿ ಕಾರ್ಮಿಕರನ್ನು ನೋಂದಾಯಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದಾರೆ.
ಈ ಕಾರ್ಮಿಕರಿಗೆ 12 ವಿಶಿಷ್ಟ ಅಂಕಿಗಳಿರುವ ಇ-ಶ್ರಮ್ ಕಾರ್ಡ್ ನೀಡಲಾಗುತ್ತದೆ. ನಂತರ, ಈ ಕಾರ್ಡ್ ಮೂಲಕ, ಕಾರ್ಮಿಕರನ್ನು ಸಾಮಾಜಿಕ ಭದ್ರತೆಯ ಯೋಜನೆಗಳಲ್ಲಿ ಸೇರಿಸಲಾಗುವುದು. ಇಎಸ್‌ಐ ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳ ಇಎಸ್‌ಐ ಕಾರ್ಡ್‌ಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ ಎಂದು ವಿವರಿಸಿದರು.
ಮುಂದಿನ ಹಂತದಲ್ಲಿ, ಒಂದು ರಾಷ್ಟ್ರ-ಒಂದು ಪಡಿತರ ಚೀಟಿಯ ಮಾದರಿಯಲ್ಲಿ, ‘ಒಂದು ರಾಷ್ಟ್ರ-ಒಂದು ಇಎಸ್‌ಐ ಕಾರ್ಡ್’ ದಿಕ್ಕಿನಲ್ಲಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಸಂಬಂಧಿತ ಉದ್ಯೋಗಿಗಳು ಇಎಸ್‌ಐ ಮತ್ತು ದೇಶದ ಯಾವುದೇ ಭಾಗದಲ್ಲಿರುವ ಅದರ ಸಂಯೋಜಿತ ಆಸ್ಪತ್ರೆಗಳಲ್ಲಿನ ಆರೋಗ್ಯ ಸೌಲಭ್ಯಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ತಿಂಗಳು ಉತ್ತರಾಖಂಡದಲ್ಲಿ, ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಮೂಲಕ ಉದ್ಯೋಗಿಗಳಿಗೆ ಒದಗಿಸಲಾದ ಆರೋಗ್ಯ ಸೇವೆಗಳನ್ನು ಬಲಪಡಿಸಲಾಗುವುದು ಎಂದು ಅವರು ಹೇಳಿದ್ದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ನಿಗಮದ 185 ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಅಡಿಯಲ್ಲಿ, ಇಎಸ್‌ಐ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ವೈದ್ಯಕೀಯ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು ರೋಗಿಯನ್ನು ಎಂಪನೆಲ್ಡ್ ವೈದ್ಯಕೀಯ ಸೇವಾ ಪೂರೈಕೆದಾರರಿಗೆ ಉಲ್ಲೇಖಿಸಲಾಗುತ್ತದೆ. ಯಾವುದೇ ಪ್ರದೇಶದಲ್ಲಿ ಇಎಸ್‌ಐ ಸೌಲಭ್ಯವು 10 ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ರೋಗಿಗಳು ನೇರವಾಗಿ ಚಿಕಿತ್ಸೆಗಾಗಿ ಎಂಪನೆಲ್ ಮಾಡಿದ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು ಎಂದು ಹೇಳಲಾಗಿದೆ.