ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳ ಮುದ್ರಣಕ್ಕಾಗಿ 2018-19 ರಿಂದ ಯಾವುದೇ ಹೊಸ ಇಂಡೆಂಟ್ ಅನ್ನು ಮುದ್ರಣಾಲಯಗಳೊಂದಿಗೆ ಇರಿಸಲಾಗಿಲ್ಲ ಎಂದು ಕೇಂದ್ರ ಇಂದು ಹೇಳಿದೆ.
ಸಾರ್ವಜನಿಕರ ವಹಿವಾಟಿನ ಬೇಡಿಕೆಗೆ ಅನುಕೂಲವಾಗುವಂತೆ ಅಪೇಕ್ಷಿತ ಮುಖಬೆಲೆಯ ನೋಟುಗಳ ಮುದ್ರಣ ನಿರ್ವಹಿಸಲು ಆರ್‌ಬಿಐ ಜೊತೆ ಸಮಾಲೋಚಿಸಲಾಗುವುದು. ನಿರ್ದಿಷ್ಟ ಮುಖಬೆಲೆಯ ನೋಟುಗಳ ಮುದ್ರಣ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ ಎಂದು ತಿಳಿಸಿದೆ.
ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾತನಾಡಿ, ಡಿ. 2 ರ ವರೆಗೆ 31 ಲಕ್ಷದ 92 ಸಾವಿರ ಕೋಟಿಗೂ ಅಧಿಕ ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ. ಕೇಂದ್ರವು ಆರ್‌ಬಿಐ ಜೊತೆ ಸಮಾಲೋಚಿಸಿ ಪ್ರತಿ ವರ್ಷ ಮುದ್ರಿಸಬೇಕಾದ ಬ್ಯಾಂಕ್ ನೋಟುಗಳ ಪ್ರಮಾಣ ಮತ್ತು ಮೌಲ್ಯವನ್ನು ನಿರ್ಧರಿಸುತ್ತದೆ. ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಸರ್ಕಾರ ಮತ್ತು ಆರ್‌ಬಿಐ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.