ನವದೆಹಲಿ: ಚಿನ್ನಾಭರಣಗಳ ಮೇಲೆ ಏಪ್ರಿಲ್ 1 ರಿಂದ ಆಲ್ಫಾನ್ಯೂಮರಿಕ್ ಹಾಲ್ ಮಾರ್ಕ್ ಹೆಚ್.ಯು.ಐ.ಡಿ. ಸಂಕೇತ ಕಡ್ಡಾಯಗೊಳಿಸಲಾಗಿದೆ. ಇಂದಿನಿಂದ ಹೊಸ ನಿಯಮ ಜಾರಿಗೆ ಬಂದಿದೆ. ಹೀಗಿದ್ದರೂ ಹಳೆಯದೆಂದು ಘೋಷಿಸಲಾಗಿರುವ ಚಿನ್ನಾಭರಣಗಳನ್ನು ಮಾರಾಟ ಮಾಡಲು 16 ಸಾವಿರಕ್ಕೂ ಅಧಿಕ ವರ್ತಕರಿಗೆ ಕಾಲಾವಕಾಶ ನೀಡಲಾಗಿದೆ.
1.56 ಲಕ್ಷ ನೋಂದಾಯಿತ ಆಭರಣ ವರ್ತಕರಲ್ಲಿ 16,243 ವರ್ತಕರಿಗೆ ಹಳೆಯ ಚಿನ್ನಾಭರಣ ಮಾರಾಟ ಮಾಡಲು ಮೂರು ತಿಂಗಳು ಕಾಲಾವಕಾಶ ವಿಸ್ತರಿಸಲಾಗಿದೆ. 2021 ರ ಜುಲೈಗಿ0ತ ಹಿಂದಿನ ಆಭರಣ ಸಂಗ್ರಹ ಮಾರಾಟ ಮಾಡಲು ಜೂನ್ ಅಂತ್ಯದವರೆಗೆ ಸರ್ಕಾರ ಅವಕಾಶ ನೀಡಿದೆ.
ಚಿನ್ನಾಭರಣಗಳು ಮತ್ತು ಚಿನ್ನದ ಕುಸುರಿ ವಸ್ತುಗಳ ಹಾಲ್ ಮಾರ್ಕಿಂಗ್ ಆದೇಶ 2020 ಕ್ಕೆ ಈ ಅಧಿಸೂಚನೆ ತಿದ್ದುಪಡಿ ತಂದಿದೆ. 16,000ಕ್ಕೂ ಅಧಿಕ ವರ್ತಕರು ತಮ್ಮಲ್ಲಿರುವ ಹಾಲ್ಮಾರ್ಕ್ ಆಭರಣಗಳ ಬಗ್ಗೆ ಘೋಷಿಸಿಕೊಂಡಿದ್ದರು. ಹೀಗೆ ಹಳೆಯದೆಂದು ಘೋಷಿಸಲಾದ ಆಭರಣ ಮಾರಾಟ ಮಾಡಲು ಮೂರು ತಿಂಗಳು ಕಾಲಾವಕಾಶ ವಿಸ್ತರಿಸಲಾಗಿದೆ.
ಹಳೆಯ ನಾಲ್ಕು-ಅಂಕಿಯ ಹಾಲ್ ಮಾರ್ಕಿಂಗ್‌ನೊಂದಿಗೆ ಆಭರಣ ದಾಸ್ತಾನು ಹೊಂದಿರುವ ಆಭರಣ ವ್ಯಾಪಾರಿಗಳಿಗೆ ಆರು-ಅಂಕಿಯ ಆಲ್ಫಾನ್ಯೂಮರಿಕ್ ಹೆಚ್‌ಯುಐಡಿ(ಹಾಲ್‌ಮಾರ್ಕ್ ಯೂನಿಕ್ ಐಡೆಂಟಿಫಿಕೇಶನ್) ಹಾಲ್‌ಮಾರ್ಕ್ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಕೇಂದ್ರವು ಶುಕ್ರವಾರ ಕೇರಳ ಹೈಕೋರ್ಟ್‌ಗೆ ತಿಳಿಸಿದೆ.
ಏಪ್ರಿಲ್ 1 ರ ನಂತರ ಹಳೆಯ ಹಾಲ್ ಮಾರ್ಕ್ ಇರುವ ಚಿನ್ನಾಭರಣಗಳನ್ನು ಮಾರಾಟ ಮಾಡಲು ವ್ಯಾಪಾರಿಗಳಿಗೆ ಅವಕಾಶ ನೀಡುವಂತೆ ಕೇಂದ್ರ ಮತ್ತು ಭಾರತೀಯ ಮಾನದಂಡಗಳ ಬ್ಯೂರೋಗೆ ನಿರ್ದೇಶನ ನೀಡುವಂತೆ ಕೋರಿ ಆಲ್ ಕೇರಳ ಚಿನ್ನ ಮತ್ತು ಬೆಳ್ಳಿ ಮರ್ಚೆಂಟ್ ಅಸೋಸಿಯೇಷನ್ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆಗೆ ಬಂದಾಗ ಈ ಸಲ್ಲಿಕೆ ಮಾಡಲಾಗಿದೆ.
ಬಿಐಎಸ್‌ನ ಹೊಸ ಆದೇಶದ ಪ್ರಕಾರ, ಕೇವಲ ಆರು-ಅಂಕಿಯ ಆಲ್ಫಾನ್ಯೂಮರಿಕ್ ಎಚ್‌ಯುಐಡಿ (ಹಾಲ್‌ಮಾರ್ಕ್ ಯೂನಿಕ್ ಐಡೆಂಟಿಫಿಕೇಶನ್) ಹೊಂದಿರುವ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಏಪ್ರಿಲ್ 1 ರಿಂದ ಅನುಮತಿಸಲಾಗುವುದು.