ನವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು 2024ರ ಡಿಸೆಂಬರ್ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್ ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸಂಸದರೊಬ್ಬರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ ಸಚಿವರು, ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಎರಡು ವರ್ಷ ವಿಸ್ತರಿಸಲಾಗಿದೆ ಎಂದರು.
ಬೀದಿ ಬದಿ ವ್ಯಾಪಾರಿಗಳನ್ನು ಸ್ವಾವಲಂಬಿಗೊಳಿಸುವ ಉದ್ದೇಶದಿಂದ ಆತ್ಮನಿರ್ಭರ ಯೋಜನೆಯಡಿ ಪಿಎಂ ಸ್ವನಿಧಿ ಯೋಜನೆ ರೂಪಿಸಲಾಗಿದ್ದು ಅವಧಿ ವಿಸ್ತರಣೆ ಮಾಡಲಾಗಿದೆ. ಮೂರನೇ ಸಾಲ ಪಡೆಯುವ ಸೌಲಭ್ಯವನ್ನೂ ಪರಿಚಯಿಸಲಾಗಿದೆ ಎಂದರು.
ಪಿಎಂ ಸ್ವನಿಧಿ ಯೋಜನೆಯಡಿ ಮೊದಲ ಸಾಲವಾಗಿ 10 ಸಾವಿರ ರೂಪಾಯಿ, ಎರಡನೇ ಸಾಲವಾಗಿ 20 ಸಾವಿರ ರೂಪಾಯಿ ಹಾಗೂ ಮೂರನೇ ಸಾಲವಾಗಿ 50,000 ರೂ.ವರೆಗೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಕಳೆದ ನವೆಂಬರ್ ವರೆಗೆ 31.73 ಲಕ್ಷ ಬೀದಿ ವ್ಯಾಪಾರಿಗಳು ಯೋಜನೆಯಡಿ ಸಾಲ ಪಡೆದುಕೊಂಡಿದ್ದಾರೆ ಎಂದರು.