ನವದೆಹಲಿ: ಹಬ್ಬದ ಹೊತ್ತಲ್ಲಿ ಬೆಲೆ ಏರಿಕೆ ಆತಂಕದಲ್ಲಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗೌರಿ ಗಣೇಶ, ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳ ಕಾರಣದಿಂದ ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುತ್ತದೆ ಎನ್ನುವ ಆತಂಕ ಜನಸಾಮಾನ್ಯರಲ್ಲಿದ್ದು, ದೇಶದ ಅನೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಬೆಲೆ ಏರಿಕೆ ಆತಂಕ ಎದುರಾಗಿದೆ.
ಆದರೆ ಸದ್ಯಕ್ಕೆ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾತನಾಡಿ, ಕಾಳಸಂತೆ ಮೇಲೆ ನಿಗಾ ವಹಿಸಲಾಗಿದೆ. ಅಕ್ಕಿ, ಗೋಧಿ, ಸಕ್ಕರೆ, ಖಾದ್ಯ ತೈಲ ದಾಸ್ತಾನು ಸಾಕಷ್ಟು ಇದೆ. ಹಬ್ಬದ ಋತುವಿನಲ್ಲಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೃತಕ ಅಭಾವ ಸೃಷ್ಟಿಸಿ ಧಾನ್ಯಗಳ ಬೆಲೆ ದಿಢೀರ್ ಏರಿಕೆ ಮಾಡುವ ಕಾಳಸಂತೆ ದಂಧೆಕೋರರ ಮೇಲೆ ಸರ್ಕಾರ ನಿಗಾ ವಹಿಸಿದೆ. ಬೇಡಿಕೆಗೆ ತಕ್ಕಷ್ಟು ಗೋಧಿ, ಅಕ್ಕಿ, ಸಕ್ಕರೆ ದಾಸ್ತಾನು ಮಾಡಲಾಗಿದೆ. ಆಹಾರ ಧಾನ್ಯಗಳ ಬೆಲೆ ಏರಿಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗದು ಎಂದು ಹೇಳಿದ್ದಾರೆ.
ದೇಶದಲ್ಲಿ ಗೋಧಿ, ಅಕ್ಕಿ, ಸಕ್ಕರೆ, ಖಾದ್ಯ ತೈಲ ಸಂಗ್ರಹ ಬೇಡಿಕೆಗೆ ತಕ್ಕಷ್ಟು ಇದೆ. ಬೆಲೆ ಏರಿಕೆ ಬಿಸಿ ತಟ್ಟುವುದಿಲ್ಲ. ವ್ಯಾಪಾರಿಗಳು, ಸಗಟು ವ್ಯಾಪಾರಿಗಳು. ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳಿಗೆ ಕೆಲವು ಆಹಾರ ಧಾನ್ಯಗಳ ದಾಸ್ತಾನು ಮೇಲೆ ಮಿತಿ ಹೇರಲಾಗಿದೆ. ಖಾದ್ಯ ತೈಲದ ದಾಸ್ತಾನು 37 ಲಕ್ಷ ಟನ್ ಇದ್ದು, ಪೂರೈಕೆಯಲ್ಲಿ ಕೊರತೆಯಾಗುವುದಿಲ್ಲ ಎಂದು ಸಂಜೀವ್ ಚೋಪ್ರಾ ಮಾಹಿತಿ ನೀಡಿದ್ದಾರೆ.
ಮುಂಗಾರು ಕೊರತೆಯಿಂದ ಭಾರತದ ಭತ್ತ ಕೃಷಿ ಉತ್ಪಾದನೆ ಕಡಿಮೆಯಾಗಿದೆ ಎಂಬ ವದಂತಿಯಿಂದ ಕೆಲವು ದಿನಗಳಿಂದ ಅಕ್ಕಿ ದರದಲ್ಲಿ ಶೇಕಡ 10ರಷ್ಟು ಏರಿಕೆಯಾಗಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಭಾರತ ಮಾತ್ರವಲ್ಲದೇ ವಿಶ್ವದ ಪ್ರಮುಖ ದೇಶಗಳಲ್ಲಿ ಅಕ್ಕಿದರ ಏರಿಕೆ ಕಂಡಿದೆ. ದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೆಲವು ಅಕ್ಕಿ ರಫ್ತು ಮೇಲೆ ನಿರ್ಬಂಧ ಹೇರಿದೆ ಎಂದು ತಿಳಿಸಿದ್ದಾರೆ.
ಆಹಾರ ಧಾನ್ಯಗಳ ಬೆಲೆ ಭಾರಿ ಏರಿಕೆಯಾಗುವ ಸಾಧ್ಯತೆ ಇಲ್ಲವಾಗಿದೆ ಎಂದು ಅವರು ನೀಡಿರುವ ಹೇಳಿಕೆ ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ.