ಕಳೆದ ಎರಡು ದಿನಗಳಿಂದ ಟ್ವಿಟರ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ನಿಮ್ಮ ಮೊದಲ ವೇತನ ಅಥವಾ ಗಳಿಕೆ ಎಷ್ಟು..? ಆಗ ನಿಮಗೆ ಎಷ್ಟು ವರ್ಷವಾಗಿತ್ತು ಎಂದು ಬೆಂಗಳೂರಿನ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು.
ಅದಕ್ಕೆ ಪ್ರತಿಯಾಗಿ ಸಾಕಷ್ಟು ಜನ ಸೆಲೆಬ್ರಿಟಿಗಳು ತಮ್ಮ ಮೊದಲ ವೇತನವೆಷ್ಟು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಹಂಸಲ್ ಮೆಹತಾ ತಾವು 16 ನೇ ವಯಸ್ಸಿನಲ್ಲಿದ್ದಾಗ ಕೆಂಪ್ಸ್ ಕಾರ್ನರ್ ಅಂಗಡಿಯಲ್ಲಿ ಸೇಲ್ಸ್ ಬಾಯ್ ಆಗಿ ಸೇರಿಕೊಂಡೆ. ಮೊದಲ ವೇತನ 450 ರೂಪಾಯಿ ಪಡೆದಿದ್ದೆ ಎಂದು ಬರೆದಿದ್ದಾರೆ.
ತಾವು ಟ್ಯೂಶನ್ ತೆಗೆದುಕೊಂಡು 18 ನೇ ವಯಸ್ಸಿನಲ್ಲಿ 80 ರೂ. ಹಣ ಗಳಿಸಿದ್ದಾಗಿ ಅನುಭವ್ ಸಿನ್ಹಾ ಹೇಳಿದ್ದಾರೆ. ನಟ ಅಲಿ ಫಜಲ್ ಅವರು 19 ನೇ ವಯಸ್ಸಿಗೇ 8000 ರೂ.ಗಳನ್ನು ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡಿ ಗಳಿಸಿದ್ದು, ಅದರಿಂದಲೇ ಕಾಲೇಜ್ ಫೀ ತುಂಬಿದ್ದಾಗಿ ತಿಳಿಸಿದ್ದಾರೆ.
ನಟ ಶರದ್ ಕೇಲ್ಕರ್ ತಮ್ಮ 18 ನೇ ವಯಸ್ಸಿಗೆ ಜಿಮ್ ಇನ್ಸ್ಟ್ರಕ್ಟರ್ ಆಗಿ ಕೆಲಸ ಪ್ರಾರಂಭಿಸಿ 1200 ರೂ.ಗಳಿಸಿದ್ದರಂತೆ. ಪುಲ್ಕಿತ್ ಸ್ಮಾರ್ಟ್ ತಮ್ಮ 16 ನೇ ವಯಸ್ಸಿನಲ್ಲಿ ಗ್ಯಾಸ್ ಏಜೆನ್ಸಿ ಎದುರು ಪೆಟ್ರೊ ಕಾರ್ಡ್ ಮಾರಾಟ ಮಾಡಿ 1500 ರೂ.ಗಳಿಸಿದ್ದರಂತೆ.
ಕಾಂಗ್ರೆಸ್ ಮುಖಂಡ ಶ್ರೀವತ್ಸ ಅವರು ರಾಜಕೀಯಕ್ಕೆ ಸೇರುವ ಮೊದಲು ವಿಪ್ರೋ ಕಂಪನಿ ಸೇರಿ 14 ಸಾವಿರ ರೂ. ಸ್ಯಾಲರಿ ಪಡೆದಿದ್ದೆ ಎಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.