ನವದೆಹಲಿ: ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ(CCPA) Ola ಮತ್ತು Uber ಗೆ ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ನೋಟೀಸ್ ನೀಡಿದೆ.
ಗ್ರಾಹಕರ ಕುಂದುಕೊರತೆ ನಿವಾರಣಾ ಕಾರ್ಯವಿಧಾನದ ಕೊರತೆ, ಸೇವೆಯಲ್ಲಿನ ಕೊರತೆ, ರದ್ದತಿ ಶುಲ್ಕಗಳ ಅಸಮಂಜಸ ನೀಡಿಕೆ ಮತ್ತು ದರಗಳನ್ನು ವಿಧಿಸಲು ಬಳಸುವ ಕ್ರಮಾವಳಿಯ ನ್ಯಾಯಸಮ್ಮತತೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ನೋಟಿಸ್ ನಲ್ಲಿ ಪ್ರಶ್ನಿಸಲಾಗಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಅಂಕಿಅಂಶಗಳ ಪ್ರಕಾರ, 2021 ರ ಏಪ್ರಿಲ್ 1 ರಿಂದ 2022 ರ ಮೇ 1 ರ ಅವಧಿಯಲ್ಲಿ ಗ್ರಾಹಕರು ಓಲಾ ವಿರುದ್ಧ ಒಟ್ಟು 2482 ಮತ್ತು ಉಬರ್ ವಿರುದ್ಧ 770 ದೂರುಗಳನ್ನು ದಾಖಲಿಸಿದ್ದಾರೆ.
ಈ ನಿಟ್ಟಿನಲ್ಲಿ ಕಳೆದ ವಾರ ಓಲಾ, ಉಬರ್, ರಾಪಿಡೊ, ಮೇರು ಕ್ಯಾಬ್ಸ್ ಮತ್ತು ಜುಗ್ನೂ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಹಕರ ದೂರುಗಳಿಗೆ ಪರಿಹಾರ ಕಲ್ಪಿಸಲು, ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ಮತ್ತು ಇ-ಕಾಮರ್ಸ್ ನಿಯಮಗಳ ಅನುಸರಣೆಯನ್ನು ಸಕ್ರಿಯಗೊಳಿಸಲು, ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ಪಾಲುದಾರರಾಗಲು ಈ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ.