ಚಾಮರಾಜನಗರ: ಮನೆ ಕಟ್ಟುವವರಿಗೆ ಮುಖ್ಯವಾಗಿ ಬೇಕಾಗಿರುವುದು ಮರಳು. ಆದರೆ, ಮರಳು ಅಭಾವದ ಕಾರಣ ಬೆಲೆ ಗಗನಕ್ಕೇರಿರುವುದರಿಂದ ಜನಸಾಮಾನ್ಯರು, ಮಧ್ಯಮವರ್ಗದವರಿಗೆ ಮನೆ ಕಟ್ಟುವುದು ಕಷ್ಟಸಾಧ್ಯವಾಗಿದೆ. ಹೆಚ್ಚಿನ ವೆಚ್ಚವನ್ನು ಮರಳಿಗೆ ಭರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಹೊಸ ಮರಳು ನೀತಿ ಜಾರಿಗೆ ಮುಂದಾಗಿದೆ.
ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಈ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಶೀಘ್ರದಲ್ಲೇ ಹೊಸದಾಗಿ ಮರಳು ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಮರಳಿನ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಒಂದರಿಂದ ಆರನೇ ಹಂತದವರೆಗೆ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮರಳು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಕಾರಣದಿಂದ ನೀತಿ ಜಾರಿ ವಿಳಂಬವಾಗಿದ್ದು, ಶೀಘ್ರವೇ ಹೊಸರು ಮರಳು ನೀತಿ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಳ್ಳ, ತೊರೆ, ನದಿಗಳು ಮೊದಲಾದ 1 ರಿಂದ 3 ನೇ ಹಂತದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮರಳು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಪ್ರತಿ ಟನ್ ಗೆ 300 ರಿಂದ 350 ರೂಪಾಯಿ ದರದಲ್ಲಿ ಸುಲಭವಾಗಿ ಮರಳು ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.