ನವದೆಹಲಿ: ಏಪ್ರಿಲ್ 1 ರ ನಾಳೆಯಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದ್ದು, ಯುಗಾದಿ ಹೊತ್ತಲ್ಲೇ ದುಬಾರಿ ದುನಿಯಾ ಶುರುವಾಗಲಿದೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ದರ ಏರಿಕೆ ಜೊತೆಗೆ ಏಪ್ರಿಲ್ 1 ರಿಂದ ಹೋಟೆಲ್ ಊಟ, ತಿಂಡಿ ಕೂಡ ದುಬಾರಿಯಾಗಲಿದೆ. ಇದರೊಂದಿಗೆ ಬಜೆಟ್ ಪ್ರಸ್ತಾಪಗಳು, ಪರಿಷ್ಕೃತ ಸುಂಕ ಜಾರಿಯಾಗಿ ಹಲವು ಉತ್ಪನ್ನಗಳ ದರ ಏರಿಕೆಯಾಗಲಿದೆ.
ಸುಂಕ ಹೆಚ್ಚಳ:
ಬಜೆಟ್ ಘೋಷಣೆಯ ಅನ್ವಯ 350 ವಸ್ತುಗಳ ಕಸ್ಟಮ್ಸ್ ಸುಂಕದಲ್ಲಿ ಬದಲಾವಣೆಯಾಗಲಿದೆ. ಕೃತಕ ಆಭರಣಗಳು, ಛತ್ರಿ, ಹೆಡ್ಫೋನ್, ಸೋಲಾರ್ ಸೆಲ್, ಎಲೆಕ್ಟ್ರಾನಿಕ್ ಆಟಿಕೆಗಳ ಬಿಡಿಭಾಗಗಳು ಸೇರಿದಂತೆ ಹಲವು ಉತ್ಪನ್ನಗಳು ದುಬಾರಿಯಾಗಲಿವೆ.
ಔಷಧ ದರ ಹೆಚ್ಚಳ:
ಅಗತ್ಯ ಔಷಧಗಳ ದರದಲ್ಲಿ ಶೇಕಡ 1 ರಷ್ಟು ಏರಿಕೆಯಾಗಲಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರದಿಂದ 800 ಅಗತ್ಯ ಔಷಧಗಳ ದರ ಏರಿಕೆಗೆ ಅನುಮತಿ ನೀಡಲಾಗಿದೆ. ನೋವು ನಿವಾರಕ, ಆಂಟಿ ಬಯೋಟಿಕ್ ಔಷಧಗಳ ದರದಲ್ಲಿ ಗಣನೀಯ ಹೆಚ್ಚಳ ಆಗಲಿದೆ.
ಮನೆ ಖರೀದಿ ದುಬಾರಿ
ಆದಾಯ ತೆರಿಗೆ ಸೆಕ್ಷನ್ 80ಇಇಎ ಅಡಿಯಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ನೀಡಲಾಗುತ್ತಿದ್ದ ತೆರಿಗೆ ರಿಯಾಯಿತಿ ಸೌಲಭ್ಯ ಮುಕ್ತಾಯವಾಗಲಿದೆ. ಮನೆ ಖರೀದಿ ಕೂಡ ದುಬಾರಿಯಾಗಲಿದೆ. ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವುದರಿಂದ ಮನೆ ಖರೀದಿ ಶೇ. 10 -20 ರಷ್ಟು ಹೆಚ್ಚಳವಾಗಲಿದೆ.
ಹೋಟೆಲ್ ತಿಂಡಿ, ಊಟ:
ಅಡುಗೆ ಎಣ್ಣೆ, ಗ್ಯಾಸ್, ಅಡುಗೆ ಸಾಮಗ್ರಿ ದರ ಏರಿಕೆಯಾದ ಹಿನ್ನೆಲೆಯಲ್ಲಿ ಹೋಟೆಲ್ ಗಳಲ್ಲಿ ತಿಂಡಿ, ಊಟದ ದರವನ್ನು ಶೇಕಡ 10 ರಷ್ಟು ಏರಿಕೆ ಮಾಡಲಾಗುವುದು.
ಕಾರ್ ಖರೀದಿಸುವವರಿಗೆ ಶಾಕ್
ಬಿಡಿ ಭಾಗಗಳ ದರ ಏರಿಕೆಯಾದ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ ಟೊಯೋಟಾ, ಆಡಿ, ಮರ್ಸಿಡಿಸ್ ಬೆನ್ಜ್, ಬಿಎಂಡಬ್ಲ್ಯೂ ಸೇರಿದಂತೆ ಐಷಾರಾಮಿ ಕಾರ್ ಗಳು ಹಾಗೂ ಇತರೆ ಕಾರ್ ಗಳ ದರ ಹೆಚ್ಚಾಗಲಿದೆ.
ಕೈಗೆಟುಕದ ಉಕ್ಕು:
ಕಳೆದ ವರ್ಷ ಏಪ್ರಿಲ್ ನಲ್ಲಿ ಪ್ರತಿಟನ್ ಗೆ 45 ಸಾವಿರ ರೂಪಾಯಿ ಇದ್ದ ಉಕ್ಕಿನ ದರ ಈಗ 90 ಸಾವಿರ ರೂ.ಗೆ ಏರಿಕೆಯಾಗಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದರ ಪರಿಣಾಮ ಗ್ರಾಹಕರಿಗೆ ಬಿಸಿ ತಟ್ಟಲಿದೆ.
ಇಳಿಕೆಯಾಗಲಿರುವ ವಸ್ತುಗಳು
ಇನ್ನು ಇದೇ ಹೊತ್ತಲ್ಲಿ ಮೊಬೈಲ್, ಮೊಬೈಲ್ ಕ್ಯಾಮೆರಾ ಲೆನ್ಸ್, ಬಟ್ಟೆ, ಚಪ್ಪಲಿ, ಪಾಲಿಶ್ ಮಾಡಿದ ವಜ್ರ, ಚರ್ಮದ ಉತ್ಪನ್ನ, ಕೃಷಿ ಸಲಕರಣೆ ಸೇರಿದಂತೆ ಕೆಲವು ವಸ್ತುಗಳು ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.