ನವದೆಹಲಿ: ಪಿಯುಸಿ ಪ್ರಮಾಣಪತ್ರ ಹೊಂದಿಲ್ಲ ಎಂಬ ಕಾರಣಕ್ಕೆ ಮೋಟಾರು ವಿಮೆ ಹಕ್ಕುಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(IRDAI) ತಿಳಿಸಿದೆ.
ಮೋಟಾರು ವಿಮಾ ಪಾಲಿಸಿ ಅಡಿಯಲ್ಲಿ ಯಾವುದೇ ಹಕ್ಕನ್ನು ನಿರಾಕರಿಸಲು ಪಿಯುಸಿ ಪ್ರಮಾಣಪತ್ರ(ವಾಹನಗಳ ಹೊಗೆ ತಪಾಸಣೆ ಪತ್ರ) ಹೊಂದಿರುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
2018ರ ಜುಲೈ 6 ರಂದು ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಅನ್ವಯ ಆಗಸ್ಟ್ 20 ರಂದು ಪಿಯುಸಿ ಸರ್ಟಿಫಿಕೇಟ್ ಕಡ್ಡಾಯವೆಂದು ಸುತ್ತೋಲೆ ಹೊರಡಿಸಲಾಗಿತ್ತು. ವಾಹನ ವಿಮೆ ನವೀಕರಿಸುವ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸುವಂತೆ ತಿಳಿಸಲಾಗಿತ್ತು.
ಆದರೆ, ಪಿಯುಸಿ ಸರ್ಟಿಫಿಕೇಟ್ ಅಲಭ್ಯತೆ ಕಾರಣದಿಂದ ವಾಹನ ವಿಮೆ ನವೀಕರಣ ತಿರಸ್ಕರಿಸಿದರೆ ಕ್ಲೈಮ್ ಪಡೆಯಲು ವಿನಂತಿಗಳನ್ನು ಕೂಡ ತಿರಸ್ಕರಿಸಬಹುದಾದ ಸಾಧ್ಯತೆಗಳ ಕಾರಣದಿಂದ ಹೊಗೆ ತಪಾಸಣೆ ಪ್ರಮಾಣಪತ್ರ ಇಲ್ಲದಿದ್ದರೂ ಪರಿಗಣಿಸುವಂತೆ ವಿಮೆ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ. ಪ್ರಮಾಣಪತ್ರದ ಅನುಪಸ್ಥಿತಿಯಲ್ಲಿ ಮೋಟಾರ್ ವಿಮಾ ಹಕ್ಕುಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.