ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸವರಿನ್ ಗೋಲ್ಡ್ ಬಾಂಡ್ ಸ್ಕೀಮ್ 2021-22 ರ ಮುಂದಿನ ಕಂತಿನ ಚಂದಾದಾರಿಕೆಗಾಗಿ ಜನವರಿ 10 ರಿಂದ ಐದು ದಿನಗಳವರೆಗೆ ತೆರೆಯಲು ಸಿದ್ಧವಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಆರ್‌ಬಿಐ ಪ್ರಕಟಣೆಯ ಪ್ರಕಾರ, 2021-22 ರ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್‌ನ ಮುಂದಿನ ಕಂತಿನ ವಿತರಣೆಯ ಬೆಲೆಯನ್ನು ಪ್ರತಿ ಗ್ರಾಂಗೆ 4,786 ರೂ.ಗೆ ನಿಗದಿಪಡಿಸಲಾಗಿದೆ. ಹೂಡಿಕೆದಾರರು ಜನವರಿ 10 ರಿಂದ ಜನವರಿ 14, 2022 ರ ನಡುವೆ ಸವರಿನ್ ಗೋಲ್ಡ್ ಬಾಂಡ್ ಸ್ಕೀಮ್ 2021-22 – ಸರಣಿ IX ಗೆ ಚಂದಾದಾರರಾಗಬಹುದು.
ಆನ್‌ಲೈನ್‌ನಲ್ಲಿ ಗೋಲ್ಡ್ ಬಾಂಡ್ ಸ್ಕೀಮ್ 2021-22 ರಲ್ಲಿ ಹೂಡಿಕೆ ಮಾಡುವ ಪ್ರತಿ ಗ್ರಾಂಗೆ 50 ರೂ. ರಿಯಾಯಿತಿ ನೀಡಲಾಗುವುದು. ಪ್ರಯೋಜನ ಪಡೆಯಲು ಚಂದಾದಾರಿಕೆಯ ಪಾವತಿಯು ಸಂಪೂರ್ಣವಾಗಿ ಆನ್‌ಲೈನ್ ಆಗಿರಬೇಕು. ಅಂತಹ ಹೂಡಿಕೆದಾರರಿಗೆ ಚಿನ್ನದ ಬಾಂಡ್‌ನ ವಿತರಣೆ ಬೆಲೆ ಪ್ರತಿ ಗ್ರಾಂ ಚಿನ್ನಕ್ಕೆ 4,736 ರೂ. ಆಗಿರುತ್ತದೆ. ಕಳೆದ ಸಲ ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 4,791 ರೂ.ಗೆ ನಿಗದಿಪಡಿಸಿತ್ತು.
ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಬಾಂಡ್‌ಗಳನ್ನು ಬ್ಯಾಂಕ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(SHCIL), ನಿಗದಿತ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳು, NSE ಮತ್ತು BSE ಮೂಲಕ ಮಾರಾಟ ಮಾಡಲಾಗುತ್ತದೆ.
ಕೇಂದ್ರ ಸರ್ಕಾರವು ನವೆಂಬರ್ 2015 ರಲ್ಲಿ ಮೊದಲ ಬಾರಿಗೆ ಸವರಿನ್ ಗೋಲ್ಡ್ ಬಾಂಡ್ ಯೋಜನೆ ಪ್ರಾರಂಭಿಸಿತು. ಈ ಯೋಜನೆಯೊಂದಿಗೆ, ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಚಿನ್ನದ ಖರೀದಿಗೆ ಬಳಸುವ ದೇಶೀಯ ಉಳಿತಾಯದ ಒಂದು ಭಾಗವನ್ನು ಬದಲಾಯಿಸುವ ಗುರಿಯನ್ನು ಸರ್ಕಾರ ಹೊಂದಿದೆ.