ನವದೆಹಲಿ: ಕೋರೋನಾ ಅವಧಿಯಲ್ಲಿ ಐಷಾರಾಮಿ ಉತ್ಪನ್ನಗಳ ಮಾರಾಟ ಪ್ರಮಾಣ ಹೆಚ್ಚಾಗಿದ್ದು, ಅಂತಹ ಐಷಾರಾಮಿ ಉತ್ಪನ್ನಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ವಿವಿಧ ಉತ್ಪನ್ನಗಳ ಮಾರಾಟ ಯಾವ ರೀತಿ ಆಗುತ್ತದೆ ಎನ್ನುವುದನ್ನು ಗಮನಿಸಿದ ಕೇಂದ್ರ ಸರ್ಕಾರ, ಉತ್ಪನ್ನಗಳ ಮಾರಾಟ ಪ್ರಮಾಣ ಆಧರಿಸಿ ಇಂತಹ ಐಷಾರಾಮಿ ಉತ್ಪನ್ನಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸಲು ಮುಂದಾಗಿದೆ.
ಜಿಎಸ್ಟಿ ಮಂಡಳಿ ಮೂಲಕ ಜಿಎಸ್ಟಿ ದರಗಳನ್ನು ಬದಲಾವಣೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಹಣಕಾಸು ಮಸೂದೆ ಮೂಲಕ ತೆರಿಗೆ, ಸೆಸ್ ಗಳನ್ನು ಇಳಿಕೆ ಮಾಡುವ ಇಲ್ಲವೇ ಹೆಚ್ಚಿಸುವ ಕೆಲಸ ಮಾಡುತ್ತದೆ. ಆತ್ಮ ನಿರ್ಭರ ಭಾರತ ಬೆಂಬಲ ಯೋಜನೆಗೆ ಅನುಗುಣವಾಗಿ ಕಸ್ಟಮ್ಸ್ ಮತ್ತು ಅಬಕಾರಿ ಸುಂಕದಲ್ಲಿ ಮಹತ್ತರ ಬದಲಾವಣೆಯಾಗಬಹುದು ಎಂದು ಹೇಳಲಾಗಿದೆ.
ಕೊರೋನಾ ಲಸಿಕೆ, ವೈದ್ಯಕೀಯ ವೆಚ್ಚ ಮೊದಲಾದವುಗಳಿಗೆ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದಿಂದ ಕೆಲವು ಐಷರಾಮಿ ಉತ್ಪನ್ನಗಳ ಮೇಲೆ ಹೊಸದಾಗಿ ಸೆಸ್ ವಿಧಿಸಬಹುದು ಎಂದು ಹೇಳಲಾಗಿದೆ.
ಕೊರೋನಾ ಸಾಂಕ್ರಾಮಿಕ ಅವಧಿಯಲ್ಲಿ ಐಷಾರಾಮಿ ಮನೆ, ದುಬಾರಿ ಕಾರು ಮತ್ತು ಆಭರಣ, ಬೆಲೆಬಾಳುವ ವಸ್ತುಗಳ ಮಾರಾಟ ಹೆಚ್ಚಾಗಿದೆ. ಮಧ್ಯಮ ವರ್ಗದ ಅಗತ್ಯ ಉತ್ಪನ್ನಗಳ ಮಾರಾಟ ಇಳಿಕೆಯಾಗಿದೆ. ಇದನ್ನು ಗಮನಿಸುತ್ತಿರುವ ಸರ್ಕಾರ ಉತ್ಪನ್ನಗಳ ಮಾರಾಟ ಪ್ರಮಾಣ ಆಧರಿಸಿ ಸೆಸ್ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.