ನವದೆಹಲಿ: ಕುಸಿದ ಆರ್ಥಿಕತೆ ಸರಿದಾರಿಗೆ ತರಲು ಮತ್ತು ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶಗೊಂಡಿರುವ ರೈತರನ್ನು ಸಮಾಧಾನಪಡಿಸುವುದು ಸೇರಿದಂತೆ ಹಲವು ಉದ್ದೇಶಗಳ ಕೇಂದ್ರ ಬಜೆಟ್ ಇಂದು ಮಂಡನೆಯಾಗಲಿದೆ.
ಬಜೆಟ್ನಲ್ಲಿ ಕೃಷಿ, ಗ್ರಾಮಾಭಿವೃದ್ಧಿಗೆ ಒತ್ತು ನೀಡುವ ನಿರೀಕ್ಷೆ ಇದ್ದು, ಉದ್ಯೋಗವಕಾಶ ಹೆಚ್ಚಳ ಮಾಡಲಾಗುವುದು. ಆದಾಯ ತೆರಿಗೆ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ.
ಬಜೆಟ್ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೂರನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಬಜೆಟ್ 2021 ಆಪ್ ನಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬಜೆಟ್ ಮಾಹಿತಿ ಪಡೆಯಬಹುದು.
ದೇಶದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಹೋರಾಟ ಮುಂದುವರೆಸಿದ್ದು, ಅವರನ್ನು ಸಮಾಧಾನಪಡಿಸಲು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಯೋಜನೆ ಪ್ರಕಟಿಸಬಹುದು.
2022 ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅನೇಕ ಪ್ರೋತ್ಸಾಹದಾಯಕ ಯೋಜನೆಗಳನ್ನು ಘೋಷಣೆ ಮಾಡಬಹುದು. ಆಹಾರ ಸಂಸ್ಕರಣೆ, ಕೃಷಿ, ನೀರಾವರಿ ಯೋಜನೆ, ಫಸಲ್ ಭೀಮಾ ಯೋಜನೆ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಹೆಚ್ಚಳ, ರೈತರ ಸಾಲ ಮನ್ನಾ, ಬೆಂಬಲ ಬೆಲೆ ಮೊದಲಾದ ವಿಚಾರಗಳ ಬಗ್ಗೆ ಮಹತ್ವದ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.