ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ 1.5 ಲಕ್ಷ ಅಂಚೆ ಕಚೇರಿಗಳಿಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಈ ವರ್ಷವೇ ದೇಶದ ಎಲ್ಲ 1.5 ಲಕ್ಷ ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ತರಲಾಗುತ್ತದೆ. ಅಂಚೆ ಕಚೇರಿಗಳು ಬ್ಯಾಂಕುಗಳೊಂದಿಗೆ ಆಂತರಿಕ ಸಂಪರ್ಕ ಪಡೆಯಲಿದ್ದು, ಜನ ಅಂಚೆ ಕಚೇರಿಯಿಂದ ಬ್ಯಾಂಕಿಗೆ ಮತ್ತು ಬ್ಯಾಂಕುಗಳಿಂದ ಅಂಚೆ ಕಚೇರಿಗಳಿಗೆ ಹಣ ವರ್ಗಾವಣೆ ಮಾಡುವುದು, ಪೋಸ್ಟ್ ಆಫೀಸ್ ಖಾತೆಗಳನ್ನು ಆನ್ಲೈನ್ ಮೂಲಕ ನಿರ್ವಹಿಸುವುದು ಸಾಧ್ಯವಾಗಲಿದೆ.
ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಮತ್ತು ಐಪಿಪಿಬಿ ಖಾತೆ ಹೊಂದಿದವರು ಖಾತೆಗಳ ನಡುವೆ ಮಾತ್ರ ಆನ್ಲೈನಲ್ಲಿ ಅಥವಾ ಅಂಚೆ ಕಛೇರಿಯಲ್ಲಿ ಹಣ ವರ್ಗಾವಣೆ ಮಾಡಬಹುದು. ಕೋರ್ ಬ್ಯಾಂಕಿಂಗ್ ವ್ಯವಸ್ಥೆ ನಂತರ ಎಲ್ಲಾ ವಾಣಿಜ್ಯ ಬ್ಯಾಂಕುಗಳೊಂದಿಗೂ ಅಂಚೆ ಕಚೇರಿಗಳಿಗೆ ಆಂತರಿಕ ಹಣ ವರ್ಗಾವಣೆ ಸೌಲಭ್ಯ ಸಿಗಲಿದೆ.
ಈ ವರ್ಷವೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂಗಳಲ್ಲಿ ಅಂಚೆಕಚೇರಿ ಖಾತೆಗಳನ್ನು ನಿರ್ವಹಿಸಬಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇನ್ನು 75 ಡಿಜಿಟಲ್ ಬ್ಯಾಂಕುಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ 75 ಜಿಲ್ಲೆಗಳಲ್ಲಿ 25 ಡಿಜಿಟಲ್ ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.