ನವದೆಹಲಿ: ಗೃಹಸಾಲದ ಬಡ್ಡಿಯಲ್ಲಿ ತೆರಿಗೆ ರಿಬೇಟ್ ಮಿತಿ ಏರಿಕೆಗೆ ಕ್ರೆಡಾಯ್ ಕೋರಿಕೆ ಸಲ್ಲಿಸಿದ್ದು, ಕೇಂದ್ರ ಬಜೆಟ್ ನಲ್ಲಿ ಮನೆ ಖರೀದಿಗೆ ನೆರವು ಘೋಷಿಸುವ ಸಾಧ್ಯತೆ ಇದೆ.
ರಿಯಲ್ ಎಸ್ಟೇಟ್ ಡೆವಲಪರ್ ಗಳು ಕೇಂದ್ರ ಬಜೆಟ್ ನಲ್ಲಿ ಗೃಹಸಾಲದ ಬಡ್ಡಿಯಲ್ಲಿ ತೆರಿಗೆ ರಿಬೇಟ್ ಮಿತಿಯನ್ನು 2 ಲಕ್ಷ ರೂ. ನಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲು ಮನವಿ ಮಾಡಿದ್ದು, ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿದರೆ ಮನೆ ಖರೀದಿಸುವವರಿಗೆ ಅನುಕೂಲವಾಗಲಿದೆ.
ಕಡಿಮೆ ಬೆಲೆಯ ವಸತಿ ಯೋಜನೆ ಕುರಿತ ವ್ಯಾಖ್ಯಾನದಲ್ಲಿ ಬದಲಾವಣೆ ಮಾಡಬೇಕು. ರಿಯಲ್ ಎಸ್ಟೇಟ್ ಹೂಡಿಕೆ, ದೀರ್ಘಾವಧಿ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಪ್ರಮಾಣದಲ್ಲಿ ಕಡಿತಗೊಳಿಸಬೇಕು. ಬಾಡಿಗೆ ಮನೆಗಳ ವಲಯ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.
ಪ್ರಧಾನಿ ಮೋದಿ ಅವರ ಎಲ್ಲರಿಗೂ ಮನೆ ಒದಗಿಸುವ ಕನಸನ್ನು ಸಾಕಾರಗೊಳಿಸಲು, ಆರ್ಥಿಕತೆಯ ಚೇತರಿಕೆಗಾಗಿ ರಿಯಾಲ್ಟಿ ವಲಯಕ್ಕೆ ತೆರಿಗೆ ವಿನಾಯಿತಿ ಉಪಕ್ರಮ ಘೋಷಿಸಬೇಕೆಂದು ಕ್ರೆಡಾಯ್ ನಿಂದ ಮನವಿ ಮಾಡಲಾಗಿದೆ. ಮನೆ ಖರೀದಿಸುವವರಿಗೆ ಸೆಕ್ಷನ್ 24ಬಿ ಅಡಿಯಲ್ಲಿ ಬಡ್ಡಿದರದಲ್ಲಿ ತೆರಿಗೆ ರಿಬೇಟ್ ನೀಡುವುದರಿಂದ ರಿಯಾಲ್ಟಿ ವಲಯದ ಚೇತರಿಕೆಗೆ ಅನುಕೂಲವಾಗುತ್ತದೆ. ಮನೆ ಖರೀದಿಸುವವರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.