ನವದೆಹಲಿ: ಪರಿಸರ ಮಾಲಿನ್ಯಕಾರಕ ವಾಹನಗಳನ್ನು ರಸ್ತೆಯಿಂದ ಹಿಂಪಡೆಯುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಮಾಲಿನ್ಯ ಉಂಟುಮಾಡುವ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವ ಮಾಲೀಕರಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಯಾವುದೇ ವಾಹನ 15 ರಿಂದ 20 ವರ್ಷ ಬಳಸಬಹುದಾಗಿದೆ ಎನ್ನಲಾಗಿದ್ದು, ನಂತರ ಅವುಗಳ ಬಳಕೆ ವಿವಿಧ ರೀತಿಯಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಮತ್ತು ವಾಹನ ಉದ್ಯಮಕ್ಕೆ ಚೇತರಿಕೆ ನೀಡಲು ಹಾಗೂ ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಬಜೆಟ್ ನಲ್ಲಿ ಯೋಜನೆ ಜಾರಿಗೆ ಚಿಂತನೆ ನಡೆದಿದೆ.
ದೇಶದಲ್ಲಿ ಸುಮಾರು 1 ಕೋಟಿಯಷ್ಟು ಇಂತಹ ವಾಹನಗಳಿದ್ದು, ಇವುಗಳನ್ನು ಮಾರಾಟ ಮಾಡಿದವರಿಗೆ ಸರ್ಕಾರ ಪ್ರಮಾಣಪತ್ರ ನೀಡಲಿದೆ. ಪ್ರಮಾಣ ಪತ್ರ ತೋರಿಸಿ ರಿಯಾಯಿತಿ ದರದಲ್ಲಿ ಹೊಸ ವಾಹನ ಖರೀದಿಸಬಹುದು. ಅಲ್ಲದೇ ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆಯಲ್ಲಿ ರಿಯಾಯಿತಿ ಪಡೆಯಬಹುದಾಗಿದೆ ಎನ್ನಲಾಗಿದೆ.