ನವದೆಹಲಿ: ಭಾರತ್ ಸ್ಟೇಜ್ 4 ಶ್ರೇಣಿಯ ವಾಹನಗಳ ಮಾರಾಟಕ್ಕೆ 10 ದಿನಗಳ ಹೆಚ್ಚುವರಿ ಅವಧಿ ನೀಡಿದ್ದು ಇದನ್ನು ಸುಪ್ರೀಂಕೋರ್ಟ್ ಹಿಂಪಡೆದುಕೊಂಡಿದೆ. ಈ ಅವಧಿಯಲ್ಲಿ ಮಾರಾಟವಾಗಿರುವ ವಾಹನಗಳ ನೊಂದಣಿ ಮಾಡದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ವಾಹನ ಖರೀದಿಸಿದ ಗ್ರಾಹಕರಿಗೆ ಆಘಾತ ಎದುರಾಗಿದೆ.
ಸುಪ್ರೀಂಕೋರ್ಟ್ ನಿರ್ದೇಶನದಿಂದ ವಾಹನ ಖರೀದಿಸಿದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಪರಿಣಾಮ ಲಾಕ್ಡೌನ್ ಅವಧಿಯ ನಂತರದಲ್ಲಿ 10 ಹೆಚ್ಚುವರಿ ದಿನಗಳ ಕಾಲ ಬಿಎಸ್ 4 ವಾಹನಗಳ ಮಾರಾಟಕ್ಕೆ ವಾಹನ ಮಾರಾಟಗಾರರು ಅನುಮತಿ ಕೋರಿದ್ದರು. ಇದನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿತ್ತು.
ಮಾರ್ಚ್ 31ರವರೆಗೆ ಹಲವು ಬಿಎಸ್ 4 ವಾಹನಗಳನ್ನು ಮಾರಾಟ ಮಾಡಿದ ಪ್ರಕರಣಗಳು ಕೂಡ ಬೆಳಕಿಗೆ ಬಂದಿದ್ದು ವಾಹನ ವ್ಯಾಪಾರಿಗಳು ಲಾಕ್ ಡೌನ್ ನಿಯಮ ಉಲ್ಲಂಘಿಸಿ ವಂಚಿಸಿದ್ದಾರೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಮಾರಾಟ ಮಾಡಿದ್ದು ನಿಯಮಗಳ ಉಲ್ಲಂಘನೆಯಾಗಿದೆ. ಇದರೊಂದಿಗೆ ಕೋರ್ಟ್ ಆದೇಶದ ಉಲ್ಲಂಘನೆ ಕೂಡ ಆಗಿದೆ ಎಂದು ಹೇಳಿರುವ ನ್ಯಾಯಪೀಠ, ಬಿಎಸ್ 4 ಶ್ರೇಣಿಯ ವಾಹನಗಳ ಮಾರಾಟಕ್ಕೆ ನೀಡಿದ 10 ದಿನಗಳ ಹೆಚ್ಚುವರಿ ಅನುಮತಿಯನ್ನು ಹಿಂಪಡೆದುಕೊಂಡಿದೆ ಎಂದು ಹೇಳಲಾಗಿದೆ.