ನವದೆಹಲಿ: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರ ಹೆಸರುಗಳನ್ನು ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.
ಕೇಂದ್ರ ಮೋಟಾರು ವಾಹನ ನಿಯಮದ ತಿದ್ದುಪಡಿಯ ಪ್ರಕಾರ, ರಾಜ್ಯ ಸಾರಿಗೆ ಇಲಾಖೆಗಳು ತಮ್ಮ ಪೋರ್ಟಲ್ ಗಳಲ್ಲಿ ಕುಡಿದು ವಾಹನ ಚಲಾಯಿಸುವುದು, ವೇಗದ ಡ್ರೈವಿಂಗ್, ರೇಸಿಂಗ್, ಅಪಾಯಕಾರಿ ಚಾಲನೆ ಮತ್ತು ಹೆಲ್ಮೆಟ್ ಧರಿಸದಂತಹ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು, ಪದೇಪದೇ ನಿಯಮ ಉಲ್ಲಂಘಿಸುವ ವ್ಯಕ್ತಿಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗೆ ಪ್ರಕಟಿಸಲಾಗುವುದು.
ಅತಿವೇಗ, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿ ತಮ್ಮ ಮತ್ತು ಬೇರೆಯವರ ಜೀವಕ್ಕೆ ಅಪಾಯವನ್ನು ಉಂಟು ಮಾಡುವವರಿಗೆ ‘ನೇಮ್ ಅಂಡ್ ಶೇಮ್’ ಸೈಟ್ ಗಳಲ್ಲಿ ಹೆಸರು ಪ್ರಕಟಿಸಲಾಗುವುದು. ಪದೇ ಪದೇ ಸಂಚಾರ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಿ ಜವಾಬ್ದಾರಿಯುತವಾಗಿ ವಾಹನ ಚಾಲನೆ ಮಾಡಲು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ನಿಯಮ ಉಲ್ಲಂಘನೆ ಮಾಡುವವರ ಡಿಎಲ್ ಅನ್ನು ಅನರ್ಹಗೊಳಿಸಲಾಗುವುದು. ನಂತರ ಒಂದು ತಿಂಗಳೊಳಗೆ ಅವರು ಮೇಲ್ಮನವಿಗೆ ಹೋಗದಿದ್ದರೆ ಅಥವಾ ಮೇಲ್ಮನವಿ ಪ್ರಾಧಿಕಾರ ಅವರ ಮನವಿಯನ್ನು ವಜಾಗೊಳಿಸಿದರೆ ಅಂತಹ ವಾಹನ ಸವಾರರ ಹೆಸರುಗಳನ್ನು ಸಾರ್ವಜನಿಕಗೊಳಿಸಬಹುದಾಗಿದೆ. ಸಾರಿಗೆ ಇಲಾಖೆಗಳು ತಮ್ಮ ಪೋರ್ಟಲ್ ನಲ್ಲಿ ನಿಯಮ ಉಲ್ಲಂಘಿಸಿದವರ ಡ್ರೈವಿಂಗ್ ಲೈಸೆನ್ಸ್ ಹಿಂಪಡೆಯಲಾಗಿದೆ ಎಂಬ ಪ್ರತ್ಯೇಕ ವಿಭಾಗ ರಚಿಸಿ ನಿಯಮ ಉಲ್ಲಂಘಿಸಿದವರ ಹೆಸರನ್ನು ಪ್ರಕಟಿಸಲಿವೆ.