ನವದೆಹಲಿ: ಹೊಸ ಐಟಿ ನಿಯಮಗಳನ್ನು ಪಾಲಿಸಬೇಕು. ದೇಶದ ಕಾನೂನನ್ನು ಅನುಸರಿಸಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ವತಿಯಿಂದ ಫೇಸ್ಬುಕ್ ಮತ್ತು ಗೂಗಲ್ ಗೆ ನಿರ್ದೇಶನ ನೀಡಲಾಗಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳ ದುರುಪಯೋಗ ಕುರಿತು ಫೇಸ್ಬುಕ್ ಮತ್ತು ಗೂಗಲ್ ಅಧಿಕಾರಿಗಳು ಮಂಗಳವಾರ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿದ್ದ ಸಂದರ್ಭದಲ್ಲಿ ನಿರ್ದೇಶನ ನೀಡಲಾಗಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅಧ್ಯಕ್ಷತೆಯ ಸಮಿತಿ ಈ ವಿಷಯದ ಬಗ್ಗೆ ವೈಯಕ್ತಿಕವಾಗಿ ಹಾಜರಾಗಬೇಕೆಂದು ಸಾಮಾಜಿಕ ಮಾಧ್ಯಮಗಳ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಫೇಸ್‌ಬುಕ್‌ನಿಂದ, ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ್ ತುಕ್ರಲ್ ಮತ್ತು ಸಾಮಾನ್ಯ ಸಲಹೆಗಾರರಾದ ನಮ್ರತಾ ಸಿಂಗ್ ಅವರು ಸಮಿತಿಯ ಮುಂದೆ ಹಾಜರಾಗಿದ್ದು, ಗೂಗಲ್ ಅನ್ನು ಭಾರತೀಯ ಮುಖ್ಯಸ್ಥ(ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ) ಅಮನ್ ಜೈನ್ ಮತ್ತು ನಿರ್ದೇಶಕರಾದ (ಕಾನೂನು) ಗೀತಾಂಜಲಿ ದುಗ್ಗಲ್ ಪ್ರತಿನಿಧಿಸಿದ್ದರು.
ಸಂಸದೀಯ ಸಮಿತಿ ಸಭೆಯ ಕಾರ್ಯಸೂಚಿಯು ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಸಾಮಾಜಿಕ / ಆನ್‌ಲೈನ್ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗವನ್ನು ತಡೆಯುವುದಾಗಿದೆ.
ಈ ಹಿಂದೆ, ಫೇಸ್‌ಬುಕ್ ಪ್ರತಿನಿಧಿಗಳು ತಮ್ಮ ಕಂಪನಿಯ ನೀತಿಯು ತಮ್ಮ ಅಧಿಕಾರಿಗಳಿಗೆ ತಮ್ಮ ಕೋವಿಡ್-ಸಂಬಂಧಿತ ಪ್ರೋಟೋಕಾಲ್‌ನಿಂದಾಗಿ ವೈಯಕ್ತಿಕ ಸಭೆಗಳಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ ಎಂದು ಸಂಸದೀಯ ಸಮಿತಿಗೆ ತಿಳಿಸಿದ್ದರು. ಆದರೆ, ಸಂಸತ್ ಕಾರ್ಯದರ್ಶಿಗಳು ಯಾವುದೇ ವಾಸ್ತವ ಸಭೆಗಳಿಗೆ ಅವಕಾಶ ನೀಡದ ಕಾರಣ ಅದರ ಅಧಿಕಾರಿಗಳು ಖುದ್ದಾಗಿ ಹಾಜರಾಗಬೇಕಾಗುತ್ತದೆ ಎಂದು ಅಧ್ಯಕ್ಷ ಶಶಿ ತರೂರ್ ಫೇಸ್‌ಬುಕ್‌ಗೆ ತಿಳಿಸಿದ್ದರು.
ಐಟಿ ಕುರಿತ ಸಂಸದೀಯ ಸಮಿತಿಯು ಮುಂದಿನ ವಾರಗಳಲ್ಲಿ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳ ಪ್ರತಿನಿಧಿಗಳನ್ನು ಕರೆಸಿಕೊಳ್ಳಲಿದೆ ಎಂದು ಹೇಳಲಾಗಿದೆ.