alex Certify BPL ಕುಟುಂಬದವರಿಗೆ 1.5 ಲಕ್ಷ ರೂ.ವರೆಗೆ ಸಾಲ, ಸಹಾಯಧನ ಮಂಜೂರು ಮಾಡಲು ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BPL ಕುಟುಂಬದವರಿಗೆ 1.5 ಲಕ್ಷ ರೂ.ವರೆಗೆ ಸಾಲ, ಸಹಾಯಧನ ಮಂಜೂರು ಮಾಡಲು ಸೂಚನೆ

ಶಿವಮೊಗ್ಗ: ಬಿಪಿಎಲ್ ಕುಟುಂಬದವರು ಸ್ವಂತ ಉದ್ಯೋಗ, ಇತರೆ ಆರ್ಥಿಕ ಚಟುವಟಿಕೆ ಕೈಗೊಂಡು ಸ್ವಾವಲಂಬಿಯಾಗಿ ಬದುಕಲು ಅವಕಾಶ ಒದಗಿಸುವ ಎನ್‍ಆರ್‍ಎಲ್‍ಎಂ/ಎನ್‍ಯುಎಲ್‍ಎಂ ನಂತಹ ಯೋಜನೆಗಳಿಗೆ ಬ್ಯಾಂಕುಗಳು ಮೊದಲನೇ ಆದ್ಯತೆ ನೀಡಿ ಸಾಲ-ಸಹಾಯಧನ ಮಂಜೂರು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಹೇಳಿದರು.

ಜಿಲ್ಲಾಡಳಿತ, ಕೌಶಲ್ಯ ಅಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಆಯ್ದ ಬ್ಯಾಂಕ್‍ಗಳ ಪ್ರತಿನಿಧಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಗುಣಮಟ್ಟದ ಜೀವನ ನಡೆಸಬೇಕೆಂಬ ಉದ್ದೇಶದಿಂದ ಸರ್ಕಾರ ಗ್ರಾಮೀಣಾಭಿವೃದ್ದಿ, ಕೌಶಲ್ಯಾಭಿವೃದ್ದಿ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಭಾಗದಲ್ಲಿ ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್ ಮತ್ತು ನಗರ ಭಾಗದಲ್ಲಿ ನ್ಯಾಷನಲ್ ಅರ್ಬನ್ ಲೈವ್ಲಿಹುಡ್ ಮಿಷನ್ ಯೋಜನೆಯಡಿ ಸ್ವ ಸಹಾಯ ಗುಂಪು ಚಟುವಟಿಕೆ, ವೈಯಕ್ತಿಕ ಚಟುವಟಿಕೆ ನಡೆಸಲು ಸಾಲ, ಸಹಾಯಧನ, ತರಬೇತಿಗಳನ್ನು ನೀಡಲಾಗುತ್ತಿದೆ.

ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು ಇಡೀ ಕುಟುಂಬದ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ. ರೂ.1.15 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯುವ ಈ ಯೋಜನೆಯ ಮಹತ್ವವನ್ನು ಫಲಾನುಭವಿಗಳು ಅರಿತು ಉಪಯೋಗ ಪಡೆಯಬೇಕು. ಈ ಯೋಜನೆಯಡಿ ವೈಯಕ್ತಿಕ, ಗುಂಪು ಚಟುವಟಿಕೆಗಳು, ತರಬೇತಿ, ನೇರ ಸಾಲ, ಸಹಾಯಧನ ಹೀಗೆ ಹಲವಾರು ಉಪಯೋಗಗಳಿವೆ. ಹಾಗೆಯೇ ಬ್ಯಾಂಕ್‍ನವರು ಕೂಡ ಈ ಯೋಜನೆಗೆ ಮೊದಲ ಆದ್ಯತೆ ನೀಡಿ ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಸಹಕರಿಸಬೇಕು. ಆಗ ಅದು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿ ಯೋಜನೆ ಸಾಕಾರಗೊಳ್ಳುವುದು. ಇಷ್ಟೆಲ್ಲಾ ಸೌಲಭ್ಯ ನೀಡುವುದರ ಹಿಂದೆ ಸರ್ಕಾರದ ಒಂದು ಒಳ್ಳೆಯ ಕಾಳಜಿ ಇದ್ದು ಬ್ಯಾಂಕ್‍ನವರು ಕೂಡ ಇದನ್ನು ಬೆಂಬಲಿಸಬೇಕು. ಇಂತಹ ಯೋಜನೆಗಳಿಂದ ಬಡ ಕುಟುಂಬಗಳ ಸುಸ್ಥಿರ ಆದಾಯ ಉತ್ಪನ್ನಕ್ಕೆ ಸಹಕಾರಿಯಾಗಲಿದೆ ಎಂದರು.

ಕೆನರಾ ಬ್ಯಾಂಕ್‍ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂದೀಪ್ ಕುಮಾರ್ ಮಾತನಾಡಿ, ಬ್ಯಾಂಕ್‍ಗಳು ಮತ್ತು ಅರ್ಜಿದಾರರ ನಡುವಿನ ಸಮನ್ವಯದ ಕೊರತೆಯೇ ಹಲವು ಯೋಜನೆಗಳ ಹಿನ್ನಡೆಗೆ ಕಾರಣವಾಗಿದ್ದು, ಸಮನ್ವಯತೆ ಸಾಧಿಸುವ ಕೆಲಸ ಆಗಬೇಕು. ಯಾವುದೇ ಯೋಜನೆ ಅಥವಾ ವ್ಯಕ್ತಿಗತವಾಗಿ ಆರ್ಥಿಕ ಶಿಸ್ತು ಬಹು ಮುಖ್ಯ. ಬೀದಿಬದಿ ವ್ಯಾಪಾರಸ್ಥರಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ನೀಡುವ ವೇಳೆ ಬ್ಯಾಂಕ್‍ನವರು ಅವರಿಗೆ ಒಂದು ಕ್ಯೂಆರ್ ಕೋಡ್ ಕೂಡ ನೀಡಬೇಕು. ಅದರಿಂದ ಅವರಿಗೆ ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ.ಸುರೇಶ್ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಬ್ಯಾಂಕುಗಳ ಸಹಕಾರ ಅತಿ ಮುಖ್ಯವಾಗಿದ್ದು, ಶೀಘ್ರವಾಗಿ ಅರ್ಜಿ ವಿಲೇ ಮಾಡುವ ಮೂಲಕ ಸಹಕರಿಸಬೇಕೆಂದು ವಿನಂತಿಸಿದರು.

ಇದೇ ವೇಳೆ ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಸೇವೆ ನೀಡಿದ 5 ಬ್ಯಾಂಕುಗಳ ಅಧಿಕಾರಿಗಳಿಗೆ ಗೌರವಿಸಲಾಯಿತು.

ಕಾರ್ಯಾಗಾರದಲ್ಲಿ ನಬಾರ್ಡ್ ಬ್ಯಾಂಕ್ ಅಧಿಕಾರಿ ರವಿ, ನಂದಿನಿ ವಿವಿಧ ಬ್ಯಾಂಕುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೌಶಲ್ಯಾಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ್ ಸ್ವಾಗತಿಸಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಮ್ಯಾನೇಜರ್ ಯತೀಶ್ ವಂದಿಸಿದರು. ಕಾಶಿ ನಿರೂಪಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...