ನವದೆಹಲಿ: ಅಡುಗೆ ಅನಿಲ ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ದೇಶದ ಪ್ರಮುಖ ಪೆಟ್ರೋಲಿಯಂ ಕಂಪನಿಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.(ಬಿಪಿಸಿಎಲ್) ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ವಾಟ್ಸಾಪ್ ಮೆಸೇಜ್ ಮೂಲಕವೂ ಹೊಸ ಅಡುಗೆ ಅನಿಲ ಸಂಪರ್ಕ ಪಡೆಯುವ, ಬುಕಿಂಗ್ ಹಾಗೂ ರಿಫಿಲ್ ಸಿಲಿಂಡರ್ ಖರೀದಿಸುವ ಅವಕಾಶ ಕಲ್ಪಿಸಿದೆ.
ಬಿಪಿಸಿಎಲ್ ಗ್ರಾಹಕ ಸ್ನೇಹಿ ವ್ಯವಸ್ಥೆಯನ್ನು ಈ ಮೂಲಕ ಪರಿಚಯಿಸಿದ್ದು, ಗ್ರಾಹಕರು 1800224344 ನಂಬರ್ ಗೆ ‘ಹಲೋ’ ಸಂದೇಶ ಕಳಿಸಿ ಲಭ್ಯ ಸೇವೆಗಳನ್ನ ಪಡೆಯಬಹುದಾಗಿದೆ. ಗ್ರಾಹಕರು ಹೆಚ್ಚುವರಿ ಸಿಲಿಂಡರ್, ಹೊಸ ಎಲ್ಪಿಜಿ ಕನೆಕ್ಷನ್, ವಿಳಾಸ ಬದಲಾವಣೆ, ವಿತರಕರ ಕುರಿತ ಮಾಹಿತಿ ಮತ್ತು ಸಿಲಿಂಡರ್ ದರ ಮೊದಲಾದ ಮಾಹಿತಿಯನ್ನು ವಾಟ್ಸಾಪ್ ಮೆಸೇಜ್ ಕಳಿಸುವ ಮೂಲಕ ಪಡೆಯಬಹುದಾಗಿದೆ.
ಈ ಕುರಿತು ಬಿಪಿಸಿಎಲ್ ನ ವಲಯ ವ್ಯವಸ್ಥಾಪಕ ಭರತ್ ಕುಮಾರ್ ರಾಯಗರ್ ಮಾತನಾಡಿ, ಕೋವಿಡ್ ನಂತರದಲ್ಲಿ ಬಿಪಿಸಿಎಲ್ ತನ್ನ ಗ್ರಾಹಕರ ಅನುಕೂಲಕ್ಕಾಗಿ ವಿನೂತನ ಸೇವೆಗಳನ್ನ ಜಾರಿಗೊಳಿಸಿದೆ. ಇದುವರೆಗೂ ಈ ಹೊಸ ಪದ್ಧತಿಯ ಮೂಲಕ ಎಲ್ಪಿಜಿ ಗ್ರಾಹಕರು 1 ಕೋಟಿ ಬುಕಿಂಗ್ ಮಾಡಿದ್ದಾರೆ. ಈ ಸೌಲಭ್ಯಗಳ ಜೊತೆಗೆ ಗ್ರಾಹಕರು ಅಮೆಜಾನ್ ಅಥವಾ ‘ಹಲೋ ಬಿಪಿಸಿಎಲ್’ ಮೊಬೈಲ್ ಆಪ್ ಸೇರಿದಂತೆ ವಿವಿಧ ಪಾವತಿ ವಿಧಾನಗಳ ಮೂಲಕವೂ ರಿಫಿಲ್ ಬುಕಿಂಗ್ ಪಾವತಿ ಮತ್ತು ಪೂರ್ವ ಪಾವತಿ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ವಾಟ್ಸಾಪ್ ಮೂಲಕ ಭಾರತ್ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ…?
ಭಾರತ್ ಗ್ಯಾಸ್ ಸಿಲಿಂಡರ್ ಕಾಯ್ದಿರಿಸಲು ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಬಿಪಿಸಿಎಲ್ ಸಂಖ್ಯೆ 1800224344 ಗೆ ‘ಹಾಯ್’ ಅಥವಾ ‘ಹಲೋ’ ಎಂದು ಸಂದೇಶ ಕಳಿಸಬೇಕು. ಇದಾದ ನಂತರ ಗ್ರಾಹಕರಿಗೆ 1 ರಿಂದ 12 ರ ಸಂಖ್ಯೆ ನಡುವೆ ಅಗತ್ಯವಿರುವ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ 1 ನ್ನು ಆಯ್ಕೆ ಮಾಡಿಕೊಂಡರೆ ಬುಕಿಂಗ್ ಖಾತರಿಯಾಗುವ ಜೊತೆಗೆ ರೆಫೆರೆನ್ಸ್ ಸಂಖ್ಯೆ ದೊರೆಯಲಿದೆ. ಹಾಗೆಯೇ ರಿಫಿಲ್ ಸಿಲಿಂಡರ್ ದೊರೆಯಬಹುದಾದ ಸಾಧ್ಯತೆಯ ದಿನಾಂಕ ಕೂಡಾ ನೀಡಲಾಗುತ್ತದೆ.