ಹಿಂದೂ -ಮುಸ್ಲಿಂ ಐಕ್ಯತೆ ಸಂದೇಶ ಸಾರುವ ಜಾಹೀರಾತಿನ ಮೂಲಕ ತನ್ನ ಆಭರಣಗಳ ಪ್ರಚಾರ ಮಾಡಲು ಹೋಗಿದ್ದ ತನಿಷ್ಕ್ ಸೋಶಿಯಲ್ ಮೀಡಿಯಾದಲ್ಲಿ ಛೀಮಾರಿ ಹಾಕಿಸಿಕೊಂಡಿತ್ತು. ಈ ಘಟನೆ ಮಾಸುವ ಮುನ್ನವೇ ತನಿಷ್ಕ್ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ.
ನಟಿ ನೀನಾ ಗುಪ್ತಾ, ಅಲಾಯಾ ಫರ್ನಿಟುರೇವಾಲಾ, ನಿಮ್ರತ್ ಕೌರ್ ಹಾಗೂ ಸಯಾನಿ ಗುಪ್ತಾ ಅಭಿನಯದ ತನಿಶ್ಕ್ನ ಜಾಹೀರಾತು ಇದೀಗ ಬಾಯ್ಕಾಟ್ ತನಿಶ್ಕ್ ಅಭಿಯಾನವನ್ನ ಮತ್ತೊಮ್ಮೆ ಶುರು ಮಾಡಲು ನೆಟ್ಟಿಗರಿಗೆ ದಾರಿ ಮಾಡಿಕೊಟ್ಟಿದೆ.
ದೀಪಾವಳಿ ಹಬ್ಬವನ್ನ ಹೇಗೆ ಆಚರಿಸಬೇಕು ಅಂತಾ ನಟಿಯರು ಮಾತನಾಡ್ತಾ ಇರ್ತಾರೆ. ಒಳ್ಳೆಯ ಬಟ್ಟೆ, ಆಭರಣ, ಕುಟುಂಬ, ತಿಂಡಿ ಹೀಗೆ ಎಲ್ಲ ವಿಚಾರದ ಬಗ್ಗೆ ಚರ್ಚೆ ಮಾಡ್ತಾರೆ. ಈ ವೇಳೆ ನಟಿ ಸಯಾನಿ ಗುಪ್ತಾ ನಾನು ಪಟಾಕಿಯನ್ನ ಸಿಡಿಸುವ ಬದಲು ಹಣತೆ ಹಚ್ಚುವೆ ಎಂದು ಹೇಳುತ್ತಾಳೆ.
ಪಟಾಕಿ ಬಳಸಲ್ಲ ಎಂದು ಹೇಳಿದ ಈ ಮಾತು ಇದೀಗ ನೆಟ್ಟಿಗರ ಕಣ್ಣನ್ನ ಕೆಂಪು ಮಾಡಿದೆ. ವಾಯುಮಾಲಿನ್ಯ ಕಾರಣದಿಂದಾಗಿ ಈಗಾಗಲೇ ಹಬ್ಬಕ್ಕೆ ಪರಿಸರ ಸ್ನೇಹಿ ಪಟಾಕಿ ಸಿಡಿಸಲು ಸರ್ಕಾರಗಳು ಅನುಮತಿ ನೀಡ್ತಿವೆ. ಈ ಸಂದರ್ಭದಲ್ಲಿ ತನಿಷ್ಕ್ ಒಳ್ಳೆಯ ಮಾಹಿತಿಯನ್ನೇ ನೀಡಿದೆ ಅಂತಾನೂ ಅನೇಕರು ಹೇಳಿದ್ದಾರೆ.
ಆದರೆ ಹಿಂದೂ ಹಬ್ಬಗಳಲ್ಲೇ ಏಕೆ ಸಾಮಾಜಿಕ ಪಿಡುಗುಗಳು ನಿಮ್ಮ ಕಣ್ಣಿಗೆ ಕಾಣುತ್ತವೆ ಅಂತಾ ಅನೇಕರು ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೇ ಬಾಯ್ಕಾಟ್ ತನಿಶ್ಕ್ ಅಭಿಯಾನವನ್ನ ಮತ್ತೊಮ್ಮೆ ಶುರು ಮಾಡಿದ್ದಾರೆ. ಈ ವಿವಾದ ತಾರಕಕ್ಕೇರುತ್ತಿದ್ದಂತೆ ತನಿಶ್ಕ್ ತನ್ನ ಜಾಹೀರಾತನ್ನ ಹಿಂಪಡೆದಿದೆ.