ನವದೆಹಲಿ: ಸಾಮಾನ್ಯವಾಗಿ ಅಡಕೆ ಧಾರಣೆ ಏರಿಕೆಯಾದ ಸಂದರ್ಭದಲ್ಲಿ ನಿಷೇಧದ ಗುಮ್ಮ ಕೇಳಿಬರುತ್ತದೆ. ಇದರಿಂದ ಏರಿಕೆಯಾಗಿದ್ದ ಬೆಲೆ ದಿಢೀರ್ ಇಳಿಕೆಯಾಗುತ್ತದೆ. ಬೆಳೆಗಾರರಿಗೆ ಸಂಕಷ್ಟ ಎದುರಾಗುತ್ತದೆ. ಸದ್ಯ ಅಡಕೆ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ. ಈಗ ಮತ್ತೊಮ್ಮೆ ಅಡಕೆ ನಿಷೇಧದ ಪ್ರಸ್ತಾಪ ಕೇಳಿಬಂದಿದೆ.
ಅಡಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ, ಅಡಕೆ ಸೇವನೆ ನಿಷೇಧಿಸಬೇಕೆಂದು ಬಿಜೆಪಿ ಸಂಸದರೊಬ್ಬರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಜಾರ್ಖಂಡ್ ರಾಜ್ಯದ ಗೊಡ್ಡ ಕ್ಷೇತ್ರದ ಬಿಜೆಪಿ ಸಂಸದ ನಿಶಾಂತ್ ದುಬೆ ಪ್ರಧಾನಿಯವರಿಗೆ ಪತ್ರ ಬರೆದಿದ್ದು, ಜಾರ್ಖಂಡ್ ರಾಜ್ಯದಲ್ಲಿ ಅಡಕೆ ಸೇವನೆಯಿಂದ ಜನ ಕ್ಯಾನ್ಸರ್ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನವರ ಬಳಕೆಗೆ ಅಡಕೆ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಡಕೆ ಸೇವನೆಯಿಂದ ಅಸ್ತಮಾ ರೋಗ ಹೆಚ್ಚಾಗುತ್ತದೆ. ಹೃದಯದ ರಕ್ತನಾಳ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಪಾನ್ ಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಡಕೆ ಬಳಸಲಾಗುತ್ತದೆ. ಮಾನವ ಬಳಕೆಗೆ ಅಡಿಕೆ ನಿಷೇಧಿಸಿ ಧಾರ್ಮಿಕ ವಿಧಾನಗಳಿಗೆ ಮಾತ್ರ ಬಳಸಲು ಅನುಮತಿ ಮುಂದುವರಿಸಬೇಕೆಂದು ಪತ್ರ ಬರೆದಿದ್ದಾರೆನ್ನಲಾಗಿದೆ.