ಬೆಂಗಳೂರು: ಟೊಮೆಟೊಗೆ ಬಂಗಾರದ ಬೆಲೆ ಬಂದ ಬಳಿಕ ಟೊಮೆಟೊ ಕಳ್ಳರ ವಾಹಳಿ ಹೆಚ್ಚಾಗಿದ್ದು, ಲಕ್ಷಾಂತರ ಮೌಲ್ಯದ ಟೊಮೆಟೊಗಳನ್ನು ವಾಹನ ಸಮೇತ ಕಳ್ಳರು ಕದ್ದು ಪರಾರಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಜುಲೈ 9ರಂದು ಬೆಂಗಳೂರಿನ ಪೀಣ್ಯಾ ಬಳಿ ನಡೆದಿದ್ದ ಟೊಮೆಟೊ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಆರ್.ಎಂ.ಸಿ ಯಾರ್ಡ್ ಠಾಣೆ ಪೊಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಚೆನ್ನೈ ಮೂಲದ ಭಾಸ್ಕರ್ ಹಾಗೂ ಸಿಂಧೂಜಾ ಎಂದು ಗುರುತಿಸಲಾಗಿದೆ. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ರೈತ ಮಲ್ಲೇಶ್ ಎಂಬುವವರು ಬೆಳೆದಿದ್ದ 3 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊವನ್ನು ವಾಹನದಲ್ಲಿ ಬೆಂಗಳೂರಿನ ಮಾರ್ಕೆಟ್ ಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಪೀಣ್ಯದ ಬಳಿ ಟೊಮೆಟೊ ವಾಹನ ತಮ್ಮ ಗಾಡಿಗೆ ಟಚ್ ಆಗಿದೆ ಎಂದು ಐವರು ಕಳ್ಳರ ಗುಂಪು ಕಿರಿಕ್ ತೆಗೆದು, ವಾಹನ ಅಡ್ಡಗಟ್ಟಿ ಟೊಮೆಟೊ ವಾಹನವನ್ನೇ ಕಳ್ಳತನ ಮಾಡಿದ್ದರು. ’
ಬಳಿಕ ಟೊಮೆಟೊಗಳನ್ನು ಚೆನ್ನೈ ಮಾರ್ಕೆಟ್ ನಲ್ಲಿ ಮಾರಾಟ ಮಾಡಿದ್ದರು. ಪ್ರಕರಣದ ಬಗ್ಗೆ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಇಬ್ಬರು ಟೊಮೆಟೊ ಕಳ್ಳರನ್ನು ಬಂಧಿಸಿದ್ದು, ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.