ಬೆಂಗಳೂರು: ಆಹಾರ ಹಾಗೂ ಕಿರಾಣಿ ಸಾಮಗ್ರಿಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುವ ಬೆಂಗಳೂರು ಮೂಲದ ಬಿಗ್ ಬಾಸ್ಕೆಟ್ ಕಂಪನಿಯ ಗ್ರಾಹಕರು ಆತಂಕ ಪಡುವ ಸುದ್ದಿ ಇಲ್ಲಿದೆ. ತಮ್ಮ ಕಂಪನಿಯ ಕೆಲ ಡೇಟಾಗಳು ಕಳುವಾದ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ವಿಭಾಗಕ್ಕೆ ಕಂಪನಿ ಶನಿವಾರ ದೂರು ನೀಡಿದೆ.
ಗ್ರಾಹಕರ ಇ ಮೇಲ್ ಐಡಿ, ಹೆಸರು, ವಿಳಾಸ, ಫೋನ್ ನಂಬರ್, ಪಾಸ್ ವರ್ಡ್ ಮುಂತಾದ ದಾಖಲೆಗಳಿರುವ 2 ಕೋಟಿ ಗ್ರಾಹಕರ ದತ್ತಾಂಶವನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿ ಅ.14 ರಂದು ಕಳ್ಳತನ ಮಾಡಿದ್ದಾರೆ. ಅದನ್ನು ಆನ್‌ಲೈನ್ ನಲ್ಲಿ 40 ಸಾವಿರ ಡಾಲರ್ ಗೆ ಮಾರಾಟಕ್ಕಿಟ್ಟ ಬಗ್ಗೆ ಅಮೆರಿಕಾದ ಸೈಬರ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಂಪನಿ ಸೈಬೆಲ್ ಅ. 30 ರಂದು ಗುರುತಿಸಿ ನ. 1 ರಂದು ನಮಗೆ ಮಾಹಿತಿ ನೀಡಿದೆ ಎಂದು ಬಿಗ್ ಬಾಸ್ಕೆಟ್ ತಿಳಿಸಿದೆ.
“ನಾವು ಗ್ರಾಹಕರ ಮಾಹಿತಿಯ ಗೌಪ್ಯತೆಗೆ ಹೆಚ್ಚಿನ ಮಹತ್ವ ನೀಡುತ್ತೇವೆ. ಕ್ರೆಡಿಟ್ ಕಾರ್ಡ್ ನಂಬರ್ ನಂಥ ಹೆಚ್ಚಿನ ಆರ್ಥಿಕ ವ್ಯವಹಾರದ ದಾಖಲೆಗಳನ್ನು ನಾವು ಸಂಗ್ರಹಿಸುವುದಿಲ್ಲ. ಇದರಿಂದ ಗ್ರಾಹಕರು ಆತಂಕ ಪಡುವ ಅವಶ್ಯಕತೆ ಇಲ್ಲ” ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
9 ವರ್ಷ ಹಳೆಯದಾದ ಬೆಂಗಳೂರು ಮೂಲದ ಬಿಗ್ ಬಾಸ್ಕೆಟ್ ಇ ಕಾಮರ್ಸ್ ಕಂಪನಿ ಚೀನಾದ ದೊಡ್ಡ ಕಂಪನಿ ಅಲಿಬಾಬಾ, ಮಿರೈ ಅಸೆಟ್, ನಾವೆರ್ ಏಷ್ಯಾ ಗ್ರೋಥ್ ಪೊಂಡ್ ಹಾಗೂ ಬ್ರಿಟಿಷ್ ಸರ್ಕಾರಿ ಮಾಲೀಕತ್ವದ ಸಿಡಿಸಿ ಗ್ರೂಪ್‌ನಿಂದ ಹಣಕಾಸು ಪಡೆದಿದೆ. ದೇಶದ 25 ನಗರಗಳಲ್ಲಿ ಸಾವಿರಕ್ಕೂ ಅಧಿಕ ಬ್ರ್ಯಾಂಡ್ ಗಳ 18000 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.