ಕೊರೊನಾ ಬಿಕ್ಕಟ್ಟು, ಲಾಕ್ ಡೌನ್ ನಿಂದಾಗಿ ಅನೇಕ ರಾಜ್ಯಗಳು ತೊಂದರೆ ಅನುಭವಿಸುತ್ತಿವೆ. ರಾಜ್ಯಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಸರ್ಕಾರಿ ನೌಕರರ ವೇತನ ಪಾವತಿ ಕಷ್ಟವಾಗ್ತಿದೆ.
ಇದಕ್ಕೆ ರಾಜ್ಯಗಳು ಕೇಂದ್ರ ಸರ್ಕಾರವನ್ನು ದೂಷಿಸುತ್ತಿವೆ. ಜಿಎಸ್‌ಟಿ ಬಾಕಿಯನ್ನು ಕೇಂದ್ರ ನೀಡಿಲ್ಲ ಎಂದು ರಾಜ್ಯಗಳು ಆರೋಪಿಸಿವೆ. ಇಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದೆ. ಸಭೆಯಲ್ಲಿ ಬಾಕಿಯಿರುವ ಬಿಲ್ ಗೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.
ಸಭೆಗೆ ಮುನ್ನವೇ ರಾಜ್ಯಗಳು ತಮ್ಮ ತೊಂದರೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಂದೇಶವನ್ನು ಕಳುಹಿಸಿವೆ. ಈ ರಾಜ್ಯಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ತ್ರಿಪುರ ಸೇರಿವೆ. ಈ ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ. ವಿಶೇಷವಾಗಿ ಇಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗ್ತಿಲ್ಲ.
ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶದ ರಾಜ್ಯಗಳ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರು ಮತ್ತು ಸಿಬ್ಬಂದಿ ತಮ್ಮ ವೇತನವನ್ನು ಸಮಯಕ್ಕೆ ಪಡೆಯುತ್ತಿಲ್ಲ. ಹೆಚ್ಚಿನ ರಾಜ್ಯಗಳು ಈಗ ಕೇಂದ್ರವನ್ನು ಇದಕ್ಕೆ ಹೊಣೆ ಮಾಡ್ತಿವೆ. ಜಿಎಸ್ಟಿ ಬಾಕಿ ಪಾವತಿಸದ ಕಾರಣ ಪರಿಸ್ಥಿತಿ ಉದ್ಭವಿಸಿದೆ ಎಂದು ಹೇಳುತ್ತಿವೆ.
ಖರ್ಚು ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಷರತ್ತುಬದ್ಧ ಸಾಲ ಮಿತಿಯನ್ನು ಹೆಚ್ಚಿಸಿದೆ. ಆದರೆ ಇದು ಕೂಡ ದೊಡ್ಡ ಪರಿಹಾರವಲ್ಲ. ಎಂಟು ರಾಜ್ಯಗಳು ಮಾತ್ರ ಇದಕ್ಕೆ ಅರ್ಹತೆ ಪಡೆದಿವೆ ಎಂದು ಹೇಳಲಾಗಿದೆ.