ಈ ಬಾರಿಯ ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭವಾಗಲಿದ್ದು, ಈ ವೇಳೆಗೆ ವಿದ್ಯಾರ್ಥಿಗಳಿಗೆ ಮೊದಲ ಜೊತೆ ಸಮವಸ್ತ್ರ ಸಿಗುವ ನಿರೀಕ್ಷೆ ಇದೆ. 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಂದಾಜು 44.49 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಆ ಸಂದರ್ಭದಲ್ಲಿ ಎರಡನೇ ಜೊತೆ ಸಮವಸ್ತ್ರವನ್ನು ನೀಡಲಾಗುತ್ತಿದ್ದು, ಆದರೆ ಈ ಬಾರಿ ಮುಂಗಾರು ಬಹುತೇಕ ಮುಕ್ತಾಯದ ಸಂದರ್ಭದಲ್ಲಿ ಅಂದರೆ ಆಗಸ್ಟ್ ವೇಳೆಗೆ 2ನೇ ಜೊತೆ ಸಮವಸ್ತ್ರ ಸಿಗುವ ಸಾಧ್ಯತೆ ಇದೆ.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಗೆ ತಡವಾಗಿತ್ತು ಎನ್ನಲಾಗಿದ್ದು, ಇದೀಗ ಚುನಾವಣಾ ಆಯೋಗ ಅನುಮತಿ ನೀಡಿರುವುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಟೆಂಡರ್ ಕರೆದಿದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಆಗಸ್ಟ್ ವೇಳೆಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಗಲಿದೆ ಎಂದು ಹೇಳಲಾಗಿದೆ.