ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆ ತೀರ್ಮಾನ ಹೊರಬಿದ್ದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಬಡ್ಡಿ ದರಗಳನ್ನು ಬದಲಾಯಿಸದಿರಲು ನಿರ್ಧರಿಸಿದೆ. ರೆಪೊ ದರ ಶೇಕಡಾ 4 ರಷ್ಟಿರಲಿದೆ. ರಿವರ್ಸ್ ರೆಪೊ ದರವು ಶೇಕಡಾ 3.35 ಮುಂದುವರೆಯಲಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಆರ್ಥಿಕ ಮಾಹಿತಿಯು ಉತ್ತಮ ಸಂಕೇತ ತೋರಿಸಿದೆ. ಜಾಗತಿಕ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬರ್ತಿದೆ. ಉತ್ಪಾದನೆ, ಚಿಲ್ಲರೆ ಮಾರಾಟವು ಅನೇಕ ದೇಶಗಳಲ್ಲಿ ಚೇತರಿಕೆ ಕಂಡಿದೆ ಎಂದಿದ್ದಾರೆ.
ಆರ್ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. 2019 ಫೆಬ್ರವರಿಯಲ್ಲಿ ದೊಡ್ಡ ಮಟ್ಟದಲ್ಲಿ ರೆಪೋ ದರದಲ್ಲಿ ಇಳಿಕೆಯಾಗಿತ್ತು. ಶೇಕಡಾ 2.50ರಷ್ಟು ರೆಪೋ ದರವನ್ನು ಕಡಿಮೆ ಮಾಡಲಾಗಿತ್ತು.
ರೆಪೊ ದರ: ರೆಪೊ ದರವು ಆರ್‌ಬಿಐ ಬ್ಯಾಂಕುಗಳಿಗೆ ಸಾಲ ನೀಡುವ ದರವಾಗಿದೆ. ಈ ಸಾಲದೊಂದಿಗೆ ಬ್ಯಾಂಕುಗಳು ಗ್ರಾಹಕರಿಗೆ ಸಾಲವನ್ನು ನೀಡುತ್ತವೆ. ರೆಪೋ ದರ ಹೆಚ್ಚಾದ್ರೆ ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸುತ್ತವೆ. ಕಡಿಮೆಯಾದರೆ ಬಡ್ಡಿ ದರವನ್ನು ಕಡಿಮೆ ಮಾಡುತ್ತವೆ. ಇದ್ರಿಂದ ಇಎಂಐ ಕೂಡ ಕಡಿಮೆಯಾಗುತ್ತದೆ.
ರಿವರ್ಸ್ ರೆಪೊ ದರ: ಅದರ ಹೆಸರೇ ಸೂಚಿಸುವಂತೆ, ಇದು ರೆಪೊ ದರದ ಹಿಮ್ಮುಖವಾಗಿದೆ. ಬ್ಯಾಂಕುಗಳು ತಮ್ಮ ಪರವಾಗಿ ಆರ್‌ಬಿಐನಲ್ಲಿ ಠೇವಣಿ ಇರಿಸಿದ ಹಣಕ್ಕೆ ಬಡ್ಡಿಯನ್ನು ಪಡೆಯುವ ದರ ಇದು.