ಮನೆ, ಕೆಲಸ, ಕಾರು, ಮಕ್ಕಳ ಭವಿಷ್ಯದ ಬಗ್ಗೆ ಆಲೋಚನ ಮಾಡಿ ಹಣ ಹೂಡಿಕೆ ಮಾಡುವ ಜನರು ನಿವೃತ್ತಿ ನಂತ್ರ ಮುಂದೇನು ಎಂಬುದನ್ನು ಆಲೋಚನೆ ಮಾಡುವುದಿಲ್ಲ. ನಿವೃತ್ತಿ ನಂತ್ರದ ಜೀವನಕ್ಕಾಗಿ ಹಣ ಹೂಡಿಕೆ ಮಾಡುವುದನ್ನು ನಿರ್ಲಕ್ಷ್ಯಿಸುತ್ತಾರೆ. ಇದ್ರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಹೂಡಿಕೆ ಮಾಡುವುದು ತಡವಾದ್ರೆ ಮುಂದೆ ತೊಂದರೆಯಾಗುತ್ತದೆ.
ಭಾರತೀಯರ ನಿವೃತ್ತ ಪ್ಲಾನ್ ಬಗ್ಗೆ ಪಿಜಿಐಎಂ ಇಂಡಿಯಾ ಮ್ಯೂಚುವಲ್ ಫಂಡ್ ಒಂದು ಸಮೀಕ್ಷೆಯನ್ನು ನಡೆಸಿದೆ. ಇದ್ರಲ್ಲಿ ಆಘಾತಕಾರಿ ವರದಿ ಹೊರ ಬಂದಿದೆ. ನಗರ ಪ್ರದೇಶದ ಜನರ ಉಳಿತಾಯ ಮತ್ತು ಹೂಡಿಕೆ ಕಡಿಮೆಯಾಗಿದೆ. ಆದಾಯದ ಶೇಕಡಾ 59 ರಷ್ಟು ಹಣವನ್ನು ಅವ್ರು ಖರ್ಚು ಮಾಡ್ತಿದ್ದಾರೆ. ದೇಶದ ಹೆಚ್ಚಿನ ಜನರು ನಿವೃತ್ತಿ ಆಲೋಚನೆ ಮಾಡಿಲ್ಲ. ನಿವೃತ್ತಿ ಯೋಜನೆಗೆ ಜನರು ಆದ್ಯತೆ ನೀಡಿಲ್ಲ ಎಂಬುದು ಸಮೀಕ್ಷೆಯಿಂದ ಹೊರಬಿದ್ದಿದೆ.
ಒಟ್ಟು 15 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರ ಸರಾಸರಿ ವಾರ್ಷಿಕ ಆದಾಯ ಸುಮಾರು 5.72 ಲಕ್ಷ ರೂಪಾಯಿಗಳು. ಸರಾಸರಿ ವಯಸ್ಸು 44 ವರ್ಷಗಳು. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 51 ರಷ್ಟು ಜನರು ತಮ್ಮ ನಿವೃತ್ತಿಗಾಗಿ ಯಾವುದೇ ಹಣಕಾಸು ಯೋಜನೆಯನ್ನು ರೂಪಿಸಿಲ್ಲ. ಶೇಕಡಾ 89 ರಷ್ಟು ಭಾರತೀಯರು ನಿವೃತ್ತಿಗೆ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ.
ಐವರು ಭಾರತೀಯರಲ್ಲಿ ಒಬ್ಬರು ಮಾತ್ರ ನಿವೃತ್ತಿ ಯೋಜನೆ ಹೆಚ್ಚಿನ ಹೊಣೆ ಎಂದು ಭಾವಿಸುತ್ತಿದ್ದಾರೆ. ಶೇಕಡಾ 41 ಜನರು ನಿವೃತ್ತಿಗಾಗಿ ಜೀವ ವಿಮೆ ಆರಿಸಿದ್ದರೆ, ಶೇಕಡಾ 37 ರಷ್ಟು ಜನರು ಸ್ಥಿರ ಠೇವಣಿ ಯೋಜನೆಗೆ ಆದ್ಯತೆ ನೀಡ್ತಿದ್ದಾರೆ. ಶೇಕಡಾ 48 ರಷ್ಟು ಭಾರತೀಯರಿಗೆ ನಿವೃತ್ತಿಯ ನಂತರದ ಜೀವನಕ್ಕೆ ಎಷ್ಟು ಹಣ ಬೇಕು ಎಂದು ತಿಳಿದಿಲ್ಲ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.