ಕಾರ್ಮಿಕ ಸಚಿವಾಲಯವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಡಿಜಿಹೆಚ್ಎಸ್ ನೌಕರರ ಸುರಕ್ಷತೆಗಾಗಿ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಸಾಮಾಜಿಕ ಅಂತರ ಹಾಗೂ ಕಂಪನಿ ನಿಯಮಗಳನ್ನು ಪಾಲಿಸುವುದು ಕಡ್ಡಾಯವೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.ಇದಲ್ಲದೆ ಸಿಸಿ ಟಿವಿ ಮೂಲಕ ನೌಕರರ ಮೇಲ್ವಿಚಾರಣೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಮಾರ್ಗಸೂಚಿಗಳನ್ನು ಪಾಲಿಸದೆ ಹೋದಲ್ಲಿ ನೌಕರರ ಬಡ್ತಿ, ಮೌಲ್ಯಮಾಪನ ನಿಲ್ಲಲಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಮಾನವ ಸಂಪನ್ಮೂಲ ನೀತಿಯನ್ನು ಬದಲಾಯಿಸಬೇಕೆಂದು ಖಾಸಗಿ ಕಂಪನಿಗಳಿಗೆ ಸೂಚಿಸಲಾಗಿದೆ. ಎಲ್ಲಾ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಅಗತ್ಯವಾಗಬೇಕೆಂದು ಹೇಳಲಾಗಿದೆ.
ಅಲ್ಲದೆ ಕೊರೊನಾ ವಿಶೇಷ ರಜೆ ಘೋಷಣೆ ಮಾಡಬೇಕೆಂದು ಸೂಚಿಸಲಾಗಿದೆ. ಕಂಪನಿಗಳು ಸ್ಥಳೀಯ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ಳಬೇಕು. ನೌಕರರಿಗೆ ಸ್ವಂತ ಬೈಕ್ ಅಥವಾ ಸೈಕಲ್ ಬಳಸುವಂತೆ ಸೂಚಿಸಬೇಕು ಎಂದಿದೆ. ಇದಲ್ಲದೆ ಮೆಟ್ಟಿಲು ಬಳಸುವಂತೆ ಸೂಚಿಸಲಾಗಿದೆ. ಲಿಫ್ಟ್ ಇದ್ದಲ್ಲಿ ಒಂದು ಬಾರಿ 2-3 ಜನರಿಗೆ ಮಾತ್ರ ಅವಕಾಶ ನೀಡಬೇಕೆಂದು ಹೇಳಿದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ತಂದೆ-ತಾಯಿಗಳಿಬ್ಬರೂ ಕೆಲಸ ಮಾಡ್ತಿದ್ದರೆ ಅವರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಬೇಕೆಂದು ಹೇಳಿದೆ. ಹಾಗೆ 65 ವರ್ಷ ಮೇಲ್ಪಟ್ಟ ಉದ್ಯೋಗಿಗಳಿದ್ದರೆ ಅವರಿಗೂ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಹ್ಯಾಂಡ್ ಸ್ಯಾನಿಟೈಜರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಕಂಪನಿಯಲ್ಲಿ ಕಡ್ಡಾಯವಾಗಲಿದೆ. ಪಿಕ್ ಅಪ್ ಡ್ರಾಪ್ ಸೌಲಭ್ಯವಿದ್ರೆ ಇದಕ್ಕೆ ದೊಡ್ಡ ವಾಹನ ಬಳಕೆ ಮಾಡಬೇಕು. ಶೇಕಡಾ 30-40ರಷ್ಟು ಉದ್ಯೋಗಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.