ನವದೆಹಲಿ: ಆಧಾರ್ ಕಾರ್ಡ್ ಭಾರತದ ನಾಗರಿಕನ ಬಹು ಮುಖ್ಯ ದಾಖಲೆಯಾಗಿದೆ. ಯಾವುದೇ ಕಾರ್ಯವಾದರೂ ಈಗ ಆಧಾರ್ ಕಾರ್ಡ್ ಬೇಕೇ ಬೇಕು. ಆಧಾರ್ ಕಾರ್ಡ್ ನಲ್ಲಿ ವಿಳಾಸ, ಹುಟ್ಟಿದ ದಿನಾಂಕ ಮುಂತಾದವನ್ನು ಬದಲಾಯಿಸುವ ಸನ್ನಿವೇಶ ಬಂದಲ್ಲಿ ಅದಕ್ಕಾಗಿ ಕೇಂದ್ರದ ಎದುರು ದಿನಗಟ್ಟಲೇ ಕ್ಯೂ ನಿಲ್ಲಬೇಕಿದೆ. ಈಗ ಅಂಥ ಸಮಸ್ಯೆ ಬಗೆಹರಿಯಲಿದೆ. ಕಾರ್ಡ್ ಅಪ್ಡೇಟ್ ಗೆ ಸಂಬಂಧಿಸಿದಂತೆ ಜನರಿಗೆ ಖುಷಿ ನೀಡುವ ಅಂಶವೊಂದು ಇಲ್ಲಿದೆ.
ಆಧಾರ್ ಕಾರ್ಡ್ ಮಾಡುವ ಯುನೀಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಮಾಹಿತಿಗಳ ಅಪ್ ಡೇಟ್ ಗೆ ಆನ್ ಲೈನ್ ನಲ್ಲೇ ವ್ಯವಸ್ಥೆ ಮಾಡಿದೆ. ಈ ಸಂಬಂಧ ಯುಐಡಿಎಐ ಟ್ವೀಟ್ ಮಾಡಿದೆ.
ವಿಳಾಸ, ಲಿಂಗ, ಹುಟ್ಟಿದ ದಿನಾಂಕವನ್ನು ಆಧಾರ್ ಕೇಂದ್ರಕ್ಕೆ ಹೋಗದೇ ಆನ್ ಲೈನ್ ನಲ್ಲೇ ಬದಲು ಮಾಡಬಹುದಾಗಿದೆ. ಆದರೆ ಅದಕ್ಕೆ ಮೊಬೈಲ್ ನಂಬರ್ ವೆಬ್ ಸೈಟ್ ನಲ್ಲಿ ಅಪ್ ಡೇಟ್ ಆಗಿರುವುದು ಕಡ್ಡಾಯವಾಗಿದೆ. ಮೊಬೈಲ್ ನಂಬರ್ ಅಥವಾ ಇ ಮೇಲ್ ವಿಳಾಸ ಅಪ್ ಡೇಟ್ ಆಗಿದೆಯೇ ಎಂಬುದನ್ನು ವೆಬ್ ಸೈಟ್ ಮೂಲಕವೇ ಒಟಿಪಿ ವಿಧಾನದ ಮೂಲಕ ಪರಿಶೀಲಿಸಬಹುದು.