
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ನಿಬಂಧನೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿ ಫೆಬ್ರವರಿ 26 ರಂದು ಭಾರತ್ ಬಂದ್ ಕರೆ ನೀಡಿದ್ದು ದೇಶದ ವಾಣಿಜ್ಯ ಮಾರುಕಟ್ಟೆಗಳನ್ನು ಸ್ಥಗಿತಗೊಳಿಸಲಾಗುವುದು.
ಅಖಿಲ ಭಾರತ ವರ್ತಕರ ಸಂಘಟನೆ – ಸಿಎಐಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಜಿಎಸ್ಟಿಯ ಕಠಿಣ ನಿಬಂಧನೆಗಳನ್ನು ಪರಿಶೀಲಿಸಬೇಕೆಂದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಜಿಎಸ್ಟಿ ಕೌನ್ಸಿಲ್ ಗಳಿಗೆ ಒತ್ತಾಯಿಸಿ ದೇಶದ 1500 ಸ್ಥಳಗಳಲ್ಲಿ ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಜಿಎಸ್ಟಿಯನ್ನು ಸರಳಿಕರಣಗೊಳಿಸಬೇಕು. ವ್ಯಾಪಾರಿಗಳಿಗೆ ಜಿಎಸ್ಟಿ ನಿಯಮ ಅನುಕೂಲವಾಗುವಂತೆ ಇದ್ದರೆ ಹೆಚ್ಚಿನ ಸಂಖ್ಯೆಯ ಜನ ಇದರ ವ್ಯಾಪ್ತಿಗೆ ಬರುತ್ತಾರೆ ಎಂದು ವ್ಯಾಪಾರಿಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.
ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಕೂಡ ಭಾರತ್ ಬಂದ್ ಕರೆಗೆ ಬೆಂಬಲ ನೀಡಿದೆ. ಫೆಬ್ರವರಿ 26 ರಂದು ಚಕ್ಕಾ ಜಾಮ್ ನಡೆಸಲಿದೆ ಎಂದು ಅವರು ಹೇಳಿದ್ದಾರೆ. ದೇಶಾದ್ಯಂತ 40,000 ಕ್ಕೂ ಹೆಚ್ಚು ವ್ಯಾಪಾರಿಗಳ ಸಂಘಗಳು ಬಂದ್ ಗೆ ಬೆಂಬಲ ನೀಡಿವೆ. ಕಳೆದ ನಾಲ್ಕು ವರ್ಷದಲ್ಲಿ ಜಿಎಸ್ಟಿ ನಿಯಮಗಳಿಗೆ ಸಂಬಂಧಿಸಿದಂತೆ ಸುಮಾರು 950 ತಿದ್ದುಪಡಿಗಳನ್ನು ಮಾಡಲಾಗಿದೆ. ಜಿಎಸ್ಟಿ ಪೋರ್ಟಲ್ ನಲ್ಲಿ, ತೆರಿಗೆ ವ್ಯವಸ್ಥೆಯಲ್ಲಿ ತೊಂದರೆಗಳಿವೆ. ಇವುಗಳನ್ನು ನಿವಾರಿಸಬೇಕು. ಸ್ವಯಂ ಪ್ರೇರಿತರಾಗಿ ಜಿಎಸ್ಟಿ ವ್ಯಾಪ್ತಿಗೆ ಬರುವ ರೀತಿಯಲ್ಲಿ ಸರಳವಾದ ನಿಯಮ ರೂಪಿಸಬೇಕು ಎಂದು ಅವರು ಹೇಳಿದ್ದಾರೆ.