ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಫಲಾನುಭವಿಗಳಿಗೆ ಒಂದು ವರ್ಷ ಕಳೆದರೂ ಬಾಂಡ್, ಪಾಸ್ಬುಕ್ ಸಿಕ್ಕಿಲ್ಲ. ರಾಜ್ಯ ಸರ್ಕಾರ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಜಾರಿಗೊಳಿಸಲು ನಿರ್ಧರಿಸಿ ಈಗಾಗಲೇ ವರ್ಷವೇ ಕಳೆದಿದೆ. ಹೀಗಿದ್ದರೂ, ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ಬುಕ್ ಸಿಕ್ಕಿಲ್ಲ. ಅಲ್ಲದೆ ಬಾಂಡ್ ಗಳನ್ನು ಕೂಡ ವಿತರಣೆ ಮಾಡಿಲ್ಲ ಎಂದು ಹೇಳಲಾಗಿದೆ.
2020 ರ ಏಪ್ರಿಲ್ 1 ರ ನಂತರ ಜನಿಸುವ ಹೆಣ್ಣುಮಕ್ಕಳನ್ನು ಕಡ್ಡಾಯವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ನೋಂದಾಯಿಸುವಂತೆ ಸರ್ಕಾರ ಸೂಚಿಸಿದೆ. ನೋಂದಣಿಯಾಗಿದ್ದರೂ ಕೂಡ ಸುಕನ್ಯಾ ಸಮೃದ್ಧಿ ಪಾಸ್ಬುಕ್ ಹೆಣ್ಣುಮಕ್ಕಳಿಗೆ ದೊರೆತಿಲ್ಲ ಎಂದು ಹೇಳಲಾಗಿದೆ.
ಬಿಪಿಎಲ್ ಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ ಸರ್ಕಾರ ಎಲ್ಐಸಿಯಲ್ಲಿ 19,300 ರೂ. ಠೇವಣಿ ಇಟ್ಟು, 18 ವರ್ಷ ತುಂಬಿದ ನಂತರ ಹೆಣ್ಣು ಮಗುವಿಗೆ 1 ಲಕ್ಷ ರೂ. ನೀಡಲಾಗುತ್ತಿತ್ತು. ಕಾರಣಾಂತರದಿಂದ ಈ ಯೋಜನೆಯನ್ನು ಎಲ್ಐಸಿಯಿಂದ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಗೆ ಬದಲಾಯಿಸಲಾಗಿದೆ. ವರ್ಷವಾದರೂ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿಲ್ಲ. ಪಾಸ್ ಬುಕ್ ಕೊಟ್ಟಿಲ್ಲ ಎನ್ನಲಾಗಿದ್ದು, ಸರ್ಕಾರದಿಂದ ಬಾಂಡ್ ಬಂದ ಕೂಡಲೇ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಹೇಳಲಾಗಿದೆ.