ವಿಶ್ವದಲ್ಲಿಯೇ ಅತಿ ಹೆಚ್ಚು ಮಹಿಳೆಯರನ್ನು ಹೊಂದಿರುವ ದೇಶ ಭಾರತ. ಭಾರತದಲ್ಲಿ 15ರಿಂದ 64 ವರ್ಷದೊಳಗಿನ ಮಹಿಳೆಯರ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದೆ. ಅದಾಗ್ಯೂ ಭಾರತದಲ್ಲಿ ಪುರುಷರ ಸಮಾನ ಮಹಿಳೆಯರಿಗೆ ನಿಲ್ಲಲು ಸಾಧ್ಯವಾಗ್ತಿಲ್ಲ.
ಇದಕ್ಕೆ ಮುಖ್ಯ ಕಾರಣ ಆರ್ಥಿಕ ಸದೃಢತೆ ಕೂಡ ಒಂದು. ಭಾರತದಲ್ಲಿ ಅನೇಕ ಮಹಿಳೆಯರಿಗೆ ಸ್ವಂತ ದುಡಿಮೆಯಿಲ್ಲ. ಮನೆ ಮಕ್ಕಳನ್ನು ನೋಡಿ ಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಕೆಲಸ ಮಾಡುವ ಮಹಿಳೆಯರಲ್ಲೂ ಬಹುತೇಕರು 10 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ.
ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರುವ ಹುಡುಗಿಯರು ಮದುವೆಯಾದ ನಂತ್ರ, ಮಕ್ಕಳಾದ ಮೇಲೆ ವೃತ್ತಿಯಿಂದ ದೂರ ಸರಿಯುತ್ತಾರೆ. ಮನೆ-ಮಕ್ಕಳ ಜೊತೆ ಉದ್ಯೋಗ ಕಷ್ಟ ಎಂಬುದು ಅನೇಕರ ಹೇಳಿಕೆ. ಇನ್ನೂ ಕೆಲವರು ಅನಿವಾರ್ಯವಾಗಿ ಕೆಲಸಕ್ಕೆ ಹೋದ್ರೂ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಕೆಲಸದಲ್ಲಿ ಆಸಕ್ತಿಯಿರುವ ಮಹಿಳೆಯರು ಮನೆಯಲ್ಲಿಯೇ ದುಡಿದು ಸಂಪಾದನೆ ಮಾಡಲು ಈಗ ಸಾಕಷ್ಟು ಅವಕಾಶಗಳಿವೆ.
ಫ್ಯಾಶನ್ ಡಿಸೈನ್ : ಬಟ್ಟೆ ಹಾಗೂ ಆಭರಣ ಮಹಿಳೆಯರ ಅಚ್ಚುಮೆಚ್ಚಿನ ಸಂಗತಿ. ಇದ್ರಲ್ಲಿ ಬ್ಯುಸಿನೆಸ್ ಮಾಡುವುದು ಮಹಿಳೆಯರಿಗೆ ಇಷ್ಟ. ಈ ಕ್ಷೇತ್ರಕ್ಕೆ ಕಾಲಿಡಲು ದೊಡ್ಡ ಮಟ್ಟದಲ್ಲಿ ಬಂಡವಾಳ ಬೇಕಾಗಿಲ್ಲ. ಏಕಾಂಗಿಯಾಗಿ ಈ ಬ್ಯುಸಿನೆಸ್ ಶುರುಮಾಡಬಹುದು. ಸ್ನೇಹಿತರು ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಮಾಡಬಹುದು.
ಟ್ಯೂಷನ್ : ನಮ್ಮ ದೇಶದಲ್ಲಿ ಶಿಕ್ಷಣ ಹೆಚ್ಚಿನ ಮಹತ್ವ ಪಡೆಯುತ್ತದೆ. ಇದು ಉದಯೋನ್ಮುಖ ವ್ಯಾಪಾರವೆಂದು ಪರಿಗಣಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕವೂ ಬೇರೆ ಪ್ರದೇಶದಲ್ಲಿ ವಾಸವಾಗಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬಹುದಾಗಿದೆ. ಇದ್ರಲ್ಲಿ ಸಾಕಷ್ಟು ಲಾಭವಿದೆ. ಅದರಲ್ಲೂ ಕೊರೊನಾ ಕಾರಣಕ್ಕೆ ಆನ್ ಲೈನ್ ಶಿಕ್ಷಣ ಈಗ ಅನಿವಾರ್ಯವಾಗಿದೆ.
ಆರೋಗ್ಯ ಮತ್ತು ಫಿಟ್ನೆಸ್ : ಆರೋಗ್ಯ, ಫಿಟ್ನೆಸ್ ಸದ್ಯ ಭಾರತದಲ್ಲಿ ಚರ್ಚೆಯಲ್ಲಿರುವ ಸಂಗತಿ. ಆರೋಗ್ಯದ ಬಗ್ಗೆ ಅರಿವು, ಕಾಳಜಿ ಹೆಚ್ಚಾಗ್ತಿದೆ. ಹಾಗಾಗಿ ಯೋಗ, ಜಿಮ್, ವ್ಯಾಯಾಮ, ಈಜು ಶಾಲೆಗಳಿಗೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಏರುತ್ತಿದೆ. ನೀವು ಈ ಕ್ಷೇತ್ರದಲ್ಲಿ ಪರಿಣಿತರಾಗಿದ್ದರೆ ತರಬೇತಿ ನೀಡಲು ಆರಂಭಿಸಬಹುದು.
ಆಹಾರ : ಅನೇಕ ಮಹಿಳೆಯರು ಅಡುಗೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ರುಚಿ ರುಚಿಯಾಗಿ ಅಡುಗೆ ಮಾಡ್ತಾರೆ. ಅಂತವರು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಅಡುಗೆ ತರಬೇತಿ ನೀಡಬಹುದು. ಇಲ್ಲ ಅಡುಗೆ ಮಾಡಿ ಮಾರಾಟ ಮಾಡಬಹುದು. ಆನ್ಲೈನ್ ಮೂಲಕವೂ ಅಡುಗೆ ವ್ಯಾಪಾರ ಶುರುಮಾಡಬಹುದು.
ಕೌನ್ಸೆಲಿಂಗ್ : ಶಿಕ್ಷಣ ಕ್ಷೇತ್ರದಲ್ಲಿ ನಗರ ಪ್ರದೇಶದ ಮಹಿಳೆಯರು ಪುರುಷರಿಗೆ ಪೈಪೋಟಿ ನೀಡುತ್ತಿದ್ದಾರೆ. ಬುದ್ಧಿವಂತ ಮಹಿಳೆಯರಿಗೆ ಕೌನ್ಸೆಲಿಂಗ್ ಒಳ್ಳೆ ಕ್ಷೇತ್ರ. ನೆಚ್ಚಿನ ಕ್ಷೇತ್ರವನ್ನು ಆಯ್ದುಕೊಂಡು ಅದಕ್ಕೆ ಸಂಬಂಧಿಸಿದಂತೆ ಬೇರೆ ವ್ಯಕ್ತಿಗಳಿಗೆ ಮಾಹಿತಿ ನೀಡಬಹುದು. ಅವರ ಉಜ್ವಲ ಭವಿಷ್ಯಕ್ಕೆ ನೆರವಾಗಬಹುದು.
ಈವೆಂಟ್ ಮ್ಯಾನೇಜ್ಮೆಂಟ್ : ಈವೆಂಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮಹಿಳೆಯರು ಕೈ ತುಂಬ ಹಣಗಳಿಸುವ ಅವಕಾಶವಿದೆ. ಕಾರ್ಯಕ್ರಮ ಹಾಗೂ ಪಾರ್ಟಿ ಮ್ಯಾನೇಜ್ಮೆಂಟ್ ನೋಡಿಕೊಳ್ಳುವುದು ಸಣ್ಣ ವಿಷ್ಯವಲ್ಲ. ಹುಟ್ಟುಹಬ್ಬ, ಮದುವೆ, ಹಬ್ಬದ ಕಾರ್ಯಕ್ರಮ, ಕಾರ್ಪೋರೇಟ್ ಕಂಪನಿಗಳ ಕಾರ್ಯಕ್ರಮದ ಜವಾಬ್ದಾರಿ ಹೊತ್ತು ಹಣ ಗಳಿಸಬಹುದಾಗಿದೆ.