ನವದೆಹಲಿ: ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಈಗ ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಹೊಸ ವೈಶಿಷ್ಟಗಳನ್ನು ಸೇರಿಸಲು ಮುಂದಾಗಿದೆ.
ಫಾಸ್ಟ್ಯಾಗ್ ನಲ್ಲಿ ಟೋಲ್ ಶುಲ್ಕ ಪಾವತಿಯೊಂದಿಗೆ ಪೆಟ್ರೋಲ್, CNG ಮತ್ತು ಡೀಸೆಲ್ ತುಂಬಿಸಿಕೊಳ್ಳಬಹುದು. ಜೊತೆಗೆ ಪಾರ್ಕಿಂಗ್ ಶುಲ್ಕವನ್ನು ಪಾವತಿಸಬಹುದಾಗಿದೆ. ವಿವಿಧ ಉದ್ದೇಶಗಳಿಗೆ ಫಾಸ್ಟ್ಯಾಗ್ ಬಳಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಎಲ್ಲ ತಾಂತ್ರಿಕ ಬಿಕ್ಕಟ್ಟು ಪರಿಹರಿಸಿದ ನಂತರ ಫಾಸ್ಟ್ಯಾಗ್ ಅನೇಕ ಉದ್ದೇಶಕ್ಕೆ ಬಳಸಲು ಅವಕಾಶ ನೀಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವರ್ಷ ಕೊರೋನಾ ಸಂದರ್ಭದಲ್ಲಿ ಟೋಲ್ ಶುಲ್ಕ, ತೆರಿಗೆ ಪಾವತಿಗೆ ಸಂಪರ್ಕವಿಲ್ಲದೆ ಹಣ ಪಾವತಿಗೆ ಫಾಸ್ಟ್ಯಾಗ್ ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ. ಫೆಬ್ರವರಿ 15 ರಿಂದ ದೇಶಾದ್ಯಂತ ಎಲ್ಲ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ.
ಪ್ರಾಯೋಗಿಕವಾಗಿ ಬೆಂಗಳೂರು, ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಪಾರ್ಕಿಂಗ್ ನಲ್ಲಿ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಬಳಸಲಾಗುತ್ತಿದೆ. ಇದರ ಯಶಸ್ಸಿನ ನಂತರ ಮುಂದಿನ ಹಂತದಲ್ಲಿ ದೆಹಲಿಯಲ್ಲಿ ಫಾಸ್ಟಾಗ್ ನಿಂದ ಪಾರ್ಕಿಂಗ್ ಶುಲ್ಕ ಪಾವತಿಗೆ ಅವಕಾಶ ನೀಡಲಾಗುವುದು. ಅದಾದ ನಂತರ ಮುಂಬೈ, ಕೋಲ್ಕತ್ತಾ, ಚೆನ್ನೈ ಸೇರಿದಂತೆ ದೇಶದ ಮಹಾನಗರಗಳಲ್ಲಿ ಸೌಲಭ್ಯ ಕಲ್ಪಿಸಲಾಗುವುದು.
ಫಾಸ್ಟ್ಯಾಗ್ ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ತಂತ್ರಜ್ಞಾನದ ಸಹಾಯವನ್ನು ಪಡೆಯಲಾಗುತ್ತದೆ. ಭವಿಷ್ಯದಲ್ಲಿ ಫಾಸ್ಟ್ಯಾಗ್ ನಿಂದ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ತುಂಬಿಸುವ ಸೌಲಭ್ಯಗಳನ್ನು ಕೂಡ ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇನ್ನು ಸಂಚಾರ ದಟ್ಟಣೆ ಹೆಚ್ಚಾಗಿರುವ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಲೇನ್ ಗಳನ್ನು ಹೆಚ್ಚಿಸಲಾಗುವುದು. ಇದರಿಂದ ಶುಲ್ಕ ಪಾವತಿಸಲು ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ಬೇಕಾಗುವುದಿಲ್ಲ ಎನ್ನಲಾಗಿದೆ.