ಬೆಂಗಳೂರು: `ಡ್ರೈವಿಂಗ್ ದಿ ನೆಕ್ಸ್ಟ್’ ಘೋಷವಾಕ್ಯದಡಿ ಇಂದಿನಿಂದ ನ. 19 ರವರೆಗೆ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು(ಬಿಟಿಎಸ್-2021) ನಡೆಯಲಿದ್ದು, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಉದ್ಘಾಟಿಸಲಿದ್ದಾರೆ.
ನಗರದ ದ ತಾಜ್ ವೆಸ್ಟ್ ಎಂಡ್ ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಶೃಂಗದಲ್ಲಿ 30ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳಲಿವೆ. ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ದಾವೋಸ್ ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ.
ಬಿಟಿಎಸ್-2021 ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಐಟಿ ಸಚಿವ ಅಶ್ವಿನ್ ವೈಷ್ಣವ್, ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪಾಲ್ಗೊಳ್ಳಲಿದ್ದಾರೆ.
ಶೃಂಗದಲ್ಲಿ ರಾಷ್ಟ್ರ ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ, ಬಯೋ ಕ್ವಿಜ್ ಮ್ತು ವಿಜ್ಞಾನ ಗ್ಯಾಲರಿ ಕೂಡ ಇರಲಿವೆ. ಬಿಟಿಎಸ್ 24ನೇ ಆವೃತ್ತಿಯ ಶೃಂಗದಲ್ಲಿ 75ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿವೆ. 300ಕ್ಕೂ ಹೆಚ್ಚು ಮುಂಚೂಣಿ ಕಂಪನಿಗಳು ಈ ಶೃಂಗಮೇಳದಲ್ಲಿ ಭಾಗವಹಿಸಲಿದ್ದು, 5 ಸಾವಿರಕ್ಕೂ ಅಧಿಕ ನವೋದ್ಯಮಗಳು ಪಾಲ್ಗೊಳ್ಳಲಿವೆ, 20 ಸಾವಿರಕ್ಕೂ ಹೆಚ್ಚು ವಾಣಿಜ್ಯ ಪ್ರತಿನಿಧಿಗಳು ಸಕ್ರಿಯರಾಗಿ ಭಾಗವಹಿಸಲಿದ್ದು, ಒಟ್ಟಿನಲ್ಲಿ 5 ಲಕ್ಷ ತಾಂತ್ರಿಕೋದ್ಯಮ ಆಸಕ್ತರನ್ನು ತಲುಪಲಿದೆ.
ಐಟಿ, ಬಿಟಿ, ಸ್ಟಾರ್ಟಪ್ ಮತ್ತು ಜಿಐಎ (ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್) ವಿಭಾಗಗಳ ಅಡಿಯಲ್ಲಿ ಬಿಟಿಎಸ್-2021 ಕಾರ್ಯಕ್ರಮಗಳು ನಡೆಯಲಿದೆ. ಈ ವಿಭಾಗಗಳಡಿಯಲ್ಲಿ ಕ್ರಮವಾಗಿ ಡಿಜಿಟಲ್ ತಂತ್ರಜ್ಞಾನ, ಹೈಬ್ರಿಡ್ ಮಲ್ಟಿಕ್ಲೌಡ್ ಜಗತ್ತು, ಮಹಿಳಾ ಉದ್ಯಮಿಗಳು, ಸೆಲ್ ಥೆರಪಿ ಮತ್ತು ಜೀನ್ ಎಡಿಟಿಂಗ್ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚರ್ಚೆ-ಸಂವಾದಗಳು ನಡೆಯಲಿವೆ
ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾರತ-ಅಮೆರಿಕ ತಂತ್ರಜ್ಞಾನ ಸಮಾಲೋಚನೆಯು ಬಹುಮುಖ್ಯವಾಗಿದೆ. ಇದರಲ್ಲಿ ಮುಖ್ಯವಾಗಿ ಆ ದೇಶದ ಪೂರ್ವ ಕರಾವಳಿಯಲ್ಲಿ ಜೀವ ವಿಜ್ಞಾನ, ಪಶ್ಚಿಮ ತೀರದಲ್ಲಿ ಸ್ಟಾರ್ಟಪ್ ಮತ್ತು ಮಧ್ಯ ಭಾಗದಲ್ಲಿ ಐಟಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಸಾಧಾರಣ ಬೆಳವಣಿಗೆಗಳನ್ನು ಉಪನ್ಯಾಸಕರು ತಿಳಿಸಲಿದ್ದಾರೆ. ಇದರ ಜೊತೆಗೆ ಇಸ್ರೇಲ್, ಜಪಾನ್, ಸ್ವೀಡನ್, ಜರ್ಮನಿ, ಕೆನಡಾ, ನೆದರ್ಲೆಂಡ್ಸ್, ತೈವಾನ್ ಮುಂತಾದ ದೇಶಗಳೊಂದಿಗೆ ಜಿಐಎ ಅಂಗವಾಗಿ ಒಡಂಬಡಿಕೆಗಳಿಗೆ ಇದು ವೇದಿಕೆಯಾಗಲಿದೆ ಎಂದು ಹೇಳಲಾಗಿದೆ.