ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಪ್ಯಾಕೇಜ್ ಪಡೆದುಕೊಂಡ ಕೀರ್ತಿಗೆ ಸಾರಂಗ್ ರವೀಂದ್ರ ಎಂಬ ವಿದ್ಯಾರ್ಥಿ ಪಾತ್ರರಾಗಿದ್ದಾರೆ.
ಕ್ಯಾಂಪಸ್ ಪ್ಲೇಸ್ ಮೆಂಟ್ ನಲ್ಲಿ ಲಂಡನ್ ಮೂಲದ ಕನ್ ಫ್ಲೆಕ್ಸ್ ಕಚೇರಿಗೆ ಆಯ್ಕೆಯಾಗಿರುವ ಅವರಿಗೆ 1.5 ಕೋಟಿ ರೂಪಾಯಿ ಪ್ಯಾಕೇಜ್ ಸಿಕ್ಕಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಸಾರಂಗ್ ಹಿಂದೆ ಅದೇ ಕಂಪನಿಯಲ್ಲಿ ಇಂಟರ್ ಶಿಪ್ ಮಾಡಿದ್ದು, ಕಂಪನಿಯಿಂದ ಅವರಿಗೆ 1.5 ಕೋಟಿ ರೂ. ಪ್ಯಾಕೇಜ್ ನೀಡಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಹಿಂದೆ ವಿವಿಯ ವಿದ್ಯಾರ್ಥಿಯೊಬ್ಬ 50 ಲಕ್ಷ ರೂ ವಾರ್ಷಿಕ ಪ್ಯಾಕೇಜ್ ಪಡೆದಿದ್ದರು. ಈಗ ಸಾರಂಗ್ 1.5 ಕೋಟಿ ರೂಪಾಯಿ ಪ್ಯಾಕೇಜ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಪಿಇಎಸ್ ವಿವಿ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ಅವರು, 1283 ವಿದ್ಯಾರ್ಥಿಗಳು ಕೊರೋನಾ ಅವಧಿಯಲ್ಲಿ ವರ್ಚುವಲ್ ಇಂಟರ್ ಶಿಪ್ ಮಾಡಿದ್ದಾರೆ. ಇಂಜಿನಿಯರಿಂಗ್, ಮ್ಯಾನೇಜ್ ಮೆಂಟ್, ಕಾಮರ್ಸ್, ಫಾರ್ಮಸಿ ವಿಭಾಗದಿಂದ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉದ್ಯೋಗಾವಕಾಶ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.