ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ.
ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ ಮತ್ತು ಜವಳಿ ಉತ್ಪನ್ನಗಳ ದರ ಶೀಘ್ರದಲ್ಲೇ ಶೇಕಡ 8 ರಿಂದ 10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿರುವ ಕಾರಣ ಈ ವಲಯದ ಉತ್ಪಾದಕ ಕಂಪನಿಗಳು ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿವೆ. ಇದರ ಪರಿಣಾಮ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.
ಖಾದ್ಯತೈಲ, ದಿನಸಿ ವಸ್ತುಗಳು, ಪೆಟ್ರೋಲ್ ಮತ್ತು ಡೀಸೆಲ್, ಪ್ಯಾಕೇಜ್ಡ್ ಫುಡ್ ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಕಚ್ಚಾ ವಸ್ತುಗಳ ದರ ಏರಿಕೆ ಮತ್ತು ಬೇಡಿಕೆ ಪರಿಣಾಮ ಮದ್ಯ, ಎಲೆಕ್ಟ್ರಾನಿಕ್ಸ್, ಬಟ್ಟೆ ದುಬಾರಿಯಾಗಲಿವೆ ಎನ್ನಲಾಗಿದೆ.
ಕಿರಾಣಿ ಅಗತ್ಯ ವಸ್ತುಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ಪ್ಯಾಕೇಜ್ ಮಾಡಿದ ಆಹಾರಗಳು ಮತ್ತು ಊಟವನ್ನು ಮಾರಾಟ ಮಾಡುವ ಕಂಪನಿಗಳು ಈಗಾಗಲೇ ಬೆಲೆಗಳನ್ನು ಹೆಚ್ಚಿಸಿವೆ. ಹೊಸ ವರ್ಷದ ವೇಳೆಗೆ ಮತ್ತೊಮ್ಮೆ ದರ ಹೆಚ್ಚಳ ಜಾರಿಗೆ ಬರಬಹುದು ಎನ್ನಲಾಗಿದೆ.