ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಕೇವಲ ಆರೋಗ್ಯದ ಮೇಲೆ ಮಾತ್ರವಲ್ಲದೇ ಆರ್ಥಿಕ ಹಾಗೂ ಸಾಮಾಜಿಕವಾಗಿಯೂ ಭಾರಿ ದುಷ್ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ.
ಕಳೆದ ಎರಡು ದಶಕದಿಂದ ಮುಂಬೈನ ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿ, ಸಾಲ ತೀರಿಸಲು ಸಾಧ್ಯವಾಗದೇ ತನ್ನೂರಿಗೆ ವಾಪಸು ಹೋಗಿರುವ ಘಟನೆ ನಡೆದಿದೆ.
ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಲ್ಲಿ ಕಳೆದ 23 ವರ್ಷದಿಂದ ಚಹಾ ಮಾರುತ್ತಿದ್ದ ಚೋಟು ಎನ್ನುವ ವ್ಯಕ್ತಿ, 2008ರಲ್ಲಿ ನಡೆದ ಮುಂಬೈ ಉಗ್ರರ ದಾಳಿಯ ವೇಳೆಯೂ ಹೆದರದೇ, ಗುಂಡೇಟಿಗೆ ಸಿಕ್ಕವರನ್ನು ಆಸ್ಪತ್ರೆಗೆ ದಾಖಲಿಸಿದ್ದ. ಕಸಬ್ ಜನರ ಮೇಲೆ ದಾಳಿ ಮಾಡುತ್ತಿದ್ದಾಗಲೂ, ತಳ್ಳುಗಾಡಿಯಲ್ಲಿ ಅನೇಕರನ್ನು ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದ.
ಆದರೀಗ ಕೊರೊನಾದ ವೇಳೆ, ಚಹಾ ಮಾರಾಟ ಸಂಪೂರ್ಣ ಕುಸಿದು ಹೋಗಿದ್ದರಿಂದ, ಕೈಯಲ್ಲಿದ್ದ ಹಣವೆಲ್ಲ ಖಾಲಿಯಾಗಿದೆ. ಇದರೊಂದಿಗೆ ಸುಮಾರು ಮೂರು ಲಕ್ಷ ರೂ. ನಷ್ಟ ಅನುಭವಿಸಿದ್ದಾನೆ. ಆದ್ದರಿಂದ ದಾರಿ ಕಾಣದೇ, ಇದೀಗ ತನ್ನೂರು ಬಿಹಾರಕ್ಕೆ ವಾಪಸಾಗಿದ್ದಾನೆ. 1995ರಲ್ಲಿ 12 ವರ್ಷದ ಬಾಲಕನಾಗಿದ್ದಾಗ ಮುಂಬೈಗೆ ಬಂದಿದ್ದ ಈತ ಪುನಃ ಹೋಗಿರಲಿಲ್ಲವಂತೆ. ಟೀ ಅಂಗಡಿಯನ್ನು ಆರಂಭಿಸಿದ ಈತ ಮೂವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಆದರೀಗ ಕೊರೊನಾ ನಷ್ಟದಿಂದ ಹೊರಬರಲು ಆಗದೇ ವಾಪಸು ಊರಿಗೆ ಪ್ರಯಾಣಿಸಿದ್ದಾನೆ.