ಬೆಂಗಳೂರು: ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಒದಗಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಲಾಗಿದೆ.
ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಕಲ್ಪಿಸಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮತ್ತು ಗೋವು ಉತ್ಪನ್ನಗಳ ಮಾರಾಟಕ್ಕೆ ಗೋ ಮಾತಾ ಸಹಕಾರ ಸಂಘ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ.
ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕಿಗೆ ಕೆಎಂಎಫ್ ಮತ್ತು ಜಿಲ್ಲಾ ಹಾಲು ಒಕ್ಕೂಟಗಳಿಂದ 260 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರದಿಂದ 100 ಕೋಟಿ ರೂಪಾಯಿ ಷೇರು ಬಂಡವಾಳ ಒದಗಿಸಲಾಗುತ್ತದೆ. ಗೋ ಉತ್ಪನ್ನಗಳ ತಾಂತ್ರಿಕತೆ ಹಾಗೂ ಪ್ರಮಾಣೀಕರಣದ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಕೋಶ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ.
ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕವಾಗಿ ಮೃತಪಟ್ಟ ಮೂರರಿಂದ ಆರು ತಿಂಗಳ ಕುರಿ, ಮೇಕೆಗಳಿಗೆ 3500 ರೂ. ಪರಿಹಾರ ನೀಡಲಾಗುವುದು. ಕುರಿ, ಮೇಕೆ ಸಾಕಾಣಿಕೆದಾರರು, ವಲಸೆ ಕುರಿಗಾರರು ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಕುರಿಗಾಹಿಗಳಿಗೆ 5 ಲಕ್ಷ ರೂ. ವಿಮೆ ಸೌಲಭ್ಯ ಒದಗಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಲಭ್ಯಕ್ಕೆ, ಕುರಿದೊಡ್ಡಿ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ.