ಮುಂಬೈ: ದೇಶದ ಬ್ಯಾಂಕುಗಳು ವೈಯಕ್ತಿಕ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಸದ್ದಿಲ್ಲದೇ ಏರಿಕೆ ಮಾಡಿವೆ. ಗೃಹ ಸಾಲದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ದಿಢೀರ್ ಬಡ್ಡಿ ದರ ಏರಿಕೆಯಿಂದ ಸಾಲಗಾರರಿಗೆ ಶಾಕ್ ಆಗಿದೆ. ಇತ್ತೀಚಿಗಷ್ಟೇ ಬ್ಯಾಂಕ್ ಗಳು ಠೇವಣಿ ಮೇಲಿನ ಬಡ್ಡಿ ದರ ಏರಿಕೆ ಮಾಡಿದ್ದವು. ಇದರ ಬೆನ್ನಲ್ಲೇ ವಾಹನ, ವೈಯಕ್ತಿಕ ಸಾಲದ ಬಡ್ಡಿ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಗೃಹ ಸಾಲದ ಬಡ್ಡಿ ದರ ಹೆಚ್ಚಳ ಮಾಡಿಲ್ಲ. ರೆಪೋ ದರದ ಜೊತೆಗೆ ಜೋಡಣೆ ಮಾಡಲಾಗಿದ್ದು, ರೆಪೋ ದರ ಏರಿಕೆಯಾಗಿಲ್ಲದ ಕಾರಣ ಗೃಹ ಸಾಲದಲ್ಲಿ ವ್ಯತ್ಯಾಸವಾಗಿಲ್ಲ.
ಆದರೆ ವಾಹನ ಸಾಲ ಮತ್ತು ವೈಯಕ್ತಿಕ ಸಾಲದಂತಹ ಇತರ ಸಾಲಗಳು ಆರ್‌ಬಿಐ ರೆಪೊ ದರದೊಂದಿಗೆ ಅಂತಹ ಸಂಪರ್ಕವನ್ನು ಹೊಂದಿರುವುದಿಲ್ಲ. MCLR ಒಂದು ನಿರ್ದಿಷ್ಟ ಸಾಲಕ್ಕಾಗಿ ಹಣಕಾಸು ಸಂಸ್ಥೆಯು ವಿಧಿಸಬೇಕಾದ ಕನಿಷ್ಠ ಬಡ್ಡಿ ದರವಾಗಿದೆ. ಇದು ಸಾಲದ ಬಡ್ಡಿದರದ ಕಡಿಮೆ ಮಿತಿಯನ್ನು ನಿರ್ದೇಶಿಸುತ್ತದೆ.
ಎಸ್.ಬಿ.ಐ.ನಲ್ಲಿ ಡಿಸೆಂಬರ್ ನಲ್ಲಿ ಶೇಕಡ 8.65 ರಷ್ಟು ಇದ್ದ ವಾಹನ ಸಾಲದ ಬಡ್ಡಿದರ ಹೆಚ್ಚಳವಾಗಿದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಶೇಕಡ 8.85 ಕ್ಕೆ ಹೆಚ್ಚಳ ಮಾಡಲಾಗಿದೆ. ಕಡಿಮೆ ಸ್ಕೋರ್ ಇದ್ದವರಿಗೆ ಬಡ್ಡಿ ದರ ಇನ್ನೂ ಹೆಚ್ಚಾಗಿರುತ್ತದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ ಶೇಕಡ 8.7 ರಷ್ಟು ಇದ್ದ ವಾಹನ ಸಾಲ ಶೇಕಡ 8.8ಕ್ಕೆ ಏರಿಕೆ ಕಂಡಿದೆ. ಈ ಹಿಂದೆ ಹಬ್ಬದ ಋತುವಿನಲ್ಲಿ ರದ್ದುಗೊಳಿಸಲಾಗಿದ್ದ ಸಂಸ್ಕರಣಾ ಶುಲ್ಕವನ್ನು ಮರು ಜಾರಿಗೊಳಿಸಲಾಗಿದೆ.
ಯೂನಿಯನ್ ಬ್ಯಾಂಕ್ ನಲ್ಲಿ ವಾಹನ ಸಾಲದ ಬಡ್ಡಿ ದರ ಶೇಕಡ 8.75 ರಷ್ಟಿಂದ ಶೇಕಡ 9.15ಕ್ಕೆ ಹೆಚ್ಚಳ ಮಾಡಲಾಗಿದೆ.
ಐ.ಡಿ.ಎಫ್.ಸಿ. ಬ್ಯಾಂಕ್ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಶೇಕಡ 10.49ರಿಂದ 10.75 ರಷ್ಟು ಹೆಚ್ಚಳ ಮಾಡಿದೆ.
ಕರ್ನಾಟಕ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲದ ಬಡ್ಡಿ ದರ ಶೇಕಡ 14.21 ರಿಂದ ಶೇಕಡ 14.28ಕ್ಕೆ ಹೆಚ್ಚಳ ಮಾಡಲಾಗಿದೆ.
ಬ್ಯಾಂಕುಗಳಲ್ಲಿ ಠೇವಣಿ ಬಡ್ಡಿ ದರ ಹೆಚ್ಚಳ ಮಾಡಿರುವುದರಿಂದ ಸಂಪನ್ಮೂಲ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಸಾಲದ ಬಡ್ಡಿ ದರ ಏರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.