ನವದೆಹಲಿ: ತೆರಿಗೆ ವಿನಾಯಿತಿ ನೀಡುವ ಸ್ಥಿರ ಠೇವಣಿ ಯೋಜನೆ ಅವಧಿಯನ್ನು ಮೂರು ವರ್ಷಕ್ಕೆ ಇಳಿಕೆ ಮಾಡಬೇಕೆಂದು ಭಾರತೀಯ ಬ್ಯಾಂಕುಗಳ ಸಂಘದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಈ ಸಲದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಭಾರತೀಯ ಬ್ಯಾಂಕುಗಳ ಮನವಿಯನ್ನು ಪರಿಗಣಿಸಿ ತೆರಿಗೆ ವಿನಾಯಿತಿ FD ಯೋಜನೆ ಅವಧಿಯನ್ನು ಮೂರು ವರ್ಷಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 80c ಅನ್ವಯ 5 ವರ್ಷಗಳ FD ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದರೆ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಮಾತ್ರ ತೆರಿಗೆ ವಿನಾಯಿತಿ ಪಡೆಯಬಹುದು.
ಪ್ರಸ್ತುತ ಮಾರುಕಟ್ಟೆಯಲ್ಲಿ ಈಕ್ವಿಟಿ ಆಧಾರಿತ ಉಳಿತಾಯ ಯೋಜನೆಗಳು ಇರುವುದರಿಂದ ತೆರಿಗೆ ವಿನಾಯಿತಿ ನೀಡುವ 5 ವರ್ಷಗಳ ಸ್ಥಿರ ಠೇವಣಿ ಯೋಜನೆ ಆಕರ್ಷಕವಾಗಿಲ್ಲ. ಹೀಗಾಗಿ ಅವಧಿಯನ್ನು ಮೂರು ವರ್ಷಕ್ಕೆ ಇಳಿಕೆ ಮಾಡಬೇಕೆಂದು ಭಾರತೀಯ ಬ್ಯಾಂಕುಗಳ ಸಂಘ ಮನವಿ ಮಾಡಿದೆ. ಇದರಿಂದ ಸ್ಥಿರ ಠೇವಣಿ ಯೋಜನೆ ಹೆಚ್ಚು ಜನರನ್ನು ಆಕರ್ಷಿಸಲಿದೆ. ಅಲ್ಲದೇ, ಬ್ಯಾಂಕುಗಳಲ್ಲಿ ಹೂಡಿಕೆ ಜಾಸ್ತಿಯಾಗಲಿದೆ ಎಂದು ಹೇಳಲಾಗಿದೆ.