
ದೇಶಾದ್ಯಂತ ಕೊರೋನಾ ಎರಡನೆಯ ಅಲೆ ಭಾರಿ ಆತಂಕವನ್ನುಂಟು ಮಾಡಿದೆ. ಕಳೆದ ವರ್ಷಕ್ಕಿಂತ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಿಕೆಯಾಗತೊಡಗಿದೆ.
ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಕೊರೊನಾದಿಂದ ತತ್ತರಿಸಿಹೋಗಿದ್ದು, ಸೋಂಕು ತಡೆಯುವ ಉದ್ದೇಶದಿಂದ ಕಠಿಣ ನಿಯಮ, ನೈಟ್ ಕರ್ಫ್ಯೂ, ಸೆಕ್ಷನ್ 144 ಸೇರಿದಂತೆ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಅಗತ್ಯ ವಸ್ತು ಮತ್ತು ಸೇವೆ ಹೊರತಾಗಿ ಉಳಿದ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದರಿಂದ ವ್ಯಾಪಾರ, ವಹಿವಾಟಿಗೆ ಭಾರಿ ತೊಂದರೆಯಾಗಿದೆ.
ಕಳೆದ ವರ್ಷ ಇದೇ ಪರಿಸ್ಥಿತಿ ಎದುರಾಗಿದ್ದ ಸಂದರ್ಭದಲ್ಲಿ ಸಾಲಗಾರರು ಸಾಲ ಪಾವತಿಸಲು ಸಮಸ್ಯೆಯಾಗಿತ್ತು.. ಹಾಗಾಗಿ ಇಎಂಐ ಪಾವತಿಸಲು ಆರು ತಿಂಗಳು ವಿಸ್ತರಿಸಲಾಗಿತ್ತು. ಬ್ಯಾಂಕುಗಳು ಸಾಲದ ಅವಧಿ ವಿಸ್ತರಣೆಯಾಗಿದ್ದರಿಂದ ಬಡ್ಡಿ ಮೇಲೆ ಬಡ್ಡಿ ಹಾಕಿದ್ದವು. ಆದರೆ, ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದ ಚಕ್ರಬಡ್ಡಿಗೆ ವಿನಾಯಿತಿ ಸಿಕ್ಕಿತ್ತು.
ಈಗ ಮತ್ತೊಮ್ಮೆ ದೇಶಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಾರ, ವಹಿವಾಟಿನ ಮೇಲೆ ಪರಿಣಾಮವನ್ನುಂಟು ಮಾಡಿದೆ. ಹೀಗಾಗಿ ಸಾಲಗಾರರಿಗೆ ಇಎಂಐ ಪಾವತಿಗೆ ಅವಧಿ ವಿಸ್ತರಿಸಬೇಕು. ಚಕ್ರಬಡ್ಡಿ ಮನ್ನಾ ಮಾಡಬೇಕೆಂಬ ಅಭಿಪ್ರಾಯಗಳು ಕೇಳಿ ಬರತೊಡಗಿದ್ದು, ಕೊರೊನಾ ಎರಡನೆಯ ಆತಂಕದಿಂದ ಬ್ಯಾಂಕುಗಳಿಗೆ ಭಯ ಆವರಿಸಿದೆ.
ಕಳೆದ ಬಾರಿ ಚಕ್ರಬಡ್ಡಿ ಮನ್ನಾ, ಸಾಲ ಮರುಪಾವತಿ ವಿಳಂಬ ಮೊದಲಾದ ಕಾರಣಗಳಿಂದ ನಷ್ಟಕ್ಕೆ ಒಳಗಾಗಿದ್ದ ಬ್ಯಾಂಕ್ ಗಳು ಕೊರೊನಾ ಎರಡನೇ ಅಲೆಯಿಂದ ಆತಂಕಕ್ಕೆ ಒಳಗಾಗಿವೆ ಎನ್ನಲಾಗಿದೆ.