ನವದೆಹಲಿ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಐದು ದಿನ ಮಾತ್ರ ಕಾರ್ಯನಿರ್ವಹಿಸಿ ಎರಡು ದಿನ ರಜೆ ನೀಡಬೇಕೆಂಬ ಉದ್ಯೋಗಿಗಳ ಬೇಡಿಕೆಗೆ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್(ಐಬಿಎ) ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಒಪ್ಪಿದಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಖಾಸಗಿ ಕಂಪನಿಗಳಲ್ಲಿ ವಾರಕ್ಕೆ 5 ದಿನಕ್ಕೆ ವೀಕೆಂಡ್ ರಜೆ ಇರುವಂತೆ ಬ್ಯಾಂಕಿಂಗ್ ವಲಯದಲ್ಲಿಯೂ ವಾರಕ್ಕೆ ಐದು ದಿನ ಕೆಲಸ, ಎರಡು ದಿನ ರಜೆ ನೀಡಬೇಕೆಂಬ ಬೇಡಿಕೆ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯಿಸ್ ನಿಂದ ಕೇಳಿ ಬಂದಿದ್ದು, ಈ ಪ್ರಸ್ತಾಪಕ್ಕೆ ಭಾರತೀಯ ಬ್ಯಾಂಕ್ ಅಸೋಸಿಯೇಷನ್ ಒಪ್ಪಿಗೆ ನೀಡಿದೆ.
ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ 25ನೇ ವಿಧಿ ಅನ್ವಯ ಇದನ್ನು ಸರ್ಕಾರ ಜಾರಿಗೊಳಿಸಬೇಕಿದೆ. ಬ್ಯಾಂಕ್ ಉದ್ಯೋಗಿಗಳಿಗೆ ನಾಲ್ಕು ಭಾನುವಾರದ ಜೊತೆಗೆ ಎರಡು ಮತ್ತು ನಾಲ್ಕನೇ ಶನಿವಾರ ರಜೆ ಇದೆ. ಇದರ ಬದಲಿಗೆ ಕೆಲಸದ ಅವಧಿಯನ್ನು 50 ನಿಮಿಷ ಹೆಚ್ಚಳ ಮಾಡಿ ವಾರಕ್ಕೆ ಐದು ದಿನ ಕೆಲಸ, ಶನಿವಾರ ಮತ್ತು ಭಾನುವಾರ ರಜೆ ನೀಡಲಾಗುವುದು ಎನ್ನಲಾಗಿದೆ.