
ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ದಿನಸಿ ಪದಾರ್ಥಗಳ ಬೆಲೆಯೂ ಏರಿಕೆಯಾಗಿರುವುದರಿಂದ ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಶಾಕ್ ನೀಡಿವೆ.
ಅಂದ ಹಾಗೆ, ಬ್ಯಾಂಕುಗಳಲ್ಲಿ ನಿಗದಿಗಿಂತ ಹೆಚ್ಚಿನ ವ್ಯವಹಾರ ನಡೆಸಿದಲ್ಲಿ ಸೇವಾ ಶುಲ್ಕ ಪಾವತಿಸಬೇಕಿದೆ. ಕಳೆದ ವರ್ಷ ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿತ್ತು. ಈಗ ಮತ್ತೆ ಸದ್ದಿಲ್ಲದೆ ಸೇವಾ ಶುಲ್ಕ ವಿಧಿಸಲಾಗುತ್ತಿದ್ದು, ಕೆಲವು ಬ್ಯಾಂಕುಗಳಲ್ಲಿ ನಿಗದಿಗಿಂತ ಹೆಚ್ಚಿನ ವಹಿವಾಟು ನಡೆಸುವ ಇಲ್ಲವೇ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಶುಲ್ಕ ಕಡಿತವಾಗುತ್ತಿದೆ. ಮಿನಿಮಂ ಬ್ಯಾಲೆನ್ಸ್ ವಿಚಾರದಲ್ಲಿಯೂ ಶುಲ್ಕ ಕಡಿತ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಕೆಲವು ಬ್ಯಾಂಕುಗಳು ಎಟಿಎಂಗಳಲ್ಲಿ ಉಚಿತವಾಗಿ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡಿವೆ. ನಿಗದಿಗಿಂತ ಹೆಚ್ಚಿನ ಸಲ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ರೆ ಶುಲ್ಕ ಪಾವತಿಸಬೇಕು. 5 ಸಾವಿರಕ್ಕೆ ಸುಮಾರು 20 ರೂಪಾಯಿಯಷ್ಟು ಶುಲ್ಕ ಕಡಿತವಾಗುತ್ತಿದೆ ಎಂದು ಹೇಳಲಾಗಿದೆ.
ಜನಸಾಮಾನ್ಯರು ಸಾಮಾನ್ಯವಾಗಿ 100, 200, 500 ರೂ. ವಿತ್ ಡ್ರಾ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಗ್ರಾಹಕರಿಗೆ ಎಟಿಎಂನಲ್ಲಿ ನಮೂದಿಸಿದ ಹಣ ಬಂದರೂ ಮೆಸೇಜ್ ನಲ್ಲಿ ಹೆಚ್ಚುವರಿ ಹಣ ಕಡಿತವಾಗಿರುವುದನ್ನು ಕಂಡು ಕೆಲವು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ ಎಂದು ಹೇಳಲಾಗಿದೆ.