ನವದೆಹಲಿ: ಬ್ಯಾಂಕ್ ಆಫ್ ಬರೋಡಾ ತನ್ನ ATM ಗಳಲ್ಲಿ UPI ಬಳಸಿ ನಗದು ಹಿಂಪಡೆಯುವ ಸೌಲಭ್ಯವನ್ನು ಪ್ರಾರಂಭಿಸಿದೆ.
ಡೆಬಿಟ್ ಕಾರ್ಡ್ ಇಲ್ಲದೆಯೋ ಎಟಿಎಂನಿಂದ ನಗದು ಪಡೆಯಲು ಪಡೆಯುವ ವ್ಯವಸ್ಥೆಗೆ ಬ್ಯಾಂಕ್ ಆಫ್ ಬರೋಡಾ ಚಾಲನೆ ನೀಡಿದೆ. ಯುಪಿಐ ವ್ಯವಸ್ಥೆಯನ್ನು ಬಳಸಿಕೊಂಡು ಎಟಿಎಂನಿಂದ ನಗದು ಪಡೆಯಬಹುದಾಗಿದೆ. ಲಭ್ಯವಿರುವ ಯಾವುದೇ ಯುಪಿಐ ಅಪ್ಲಿಕೇಶನ್ ಬಳಸಿಕೊಂಡು ಬ್ಯಾಂಕ್ ಆಫ್ ಬರೋಡಾ ಎಟಿಎಂನಿಂದ ನಗದು ಪಡೆದುಕೊಳ್ಳಬಹುದು. ಇಂತಹ ಸೇವೆಯನ್ನು ಆರಂಭಿಸಿದ ಸರ್ಕಾರಿ ಸ್ವಾಮ್ಯದ ಮೊದಲ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಬ್ಯಾಂಕ್ ಆಫ್ ಬರೋಡಾ ಪಾತ್ರವಾಗಿದೆ.
ಹಣ ಪಡೆಯಲು ಡೆಬಿಟ್ ಕಾರ್ಡ್ ಅಗತ್ಯ ಇಲ್ಲ. ಯುಪಿಐ ನಗದು ಪಡೆಯುವಿಕೆ ಆಯ್ಕೆ ಮಾಡಿಕೊಳ್ಳುವ ಗ್ರಾಹಕರು ನಗದು ಮೊತ್ತ ನಮೂದಿಸಬೇಕು. ನಂತರ ಎಟಿಎಂ ಪರದೆ ಮೇಲೆ ಕ್ಯೂಆರ್ ಕೋಡ್ ಕಾಣಿಸಿಕೊಳ್ಳಲಿದ್ದು, ಅದನ್ನು ಯುಪಿಐ ಅಪ್ಲಿಕೇಶನ್ ಬಳಸಿ ಸ್ಕ್ಯಾನ್ ಮಾಡಬೇಕು. ನಂತರದಲ್ಲಿ ಮೊಬೈಲ್ ನಲ್ಲಿ ತಮ್ಮ ಯುಪಿಐ ಗುಪ್ತ ಸಂಖ್ಯೆ ನಮೂದಿಸಿ ಹಣ ಪಡೆದುಕೊಳ್ಳಬಹುದು.
ನಿರ್ದಿಷ್ಟವಾದ ಖಾತೆಯಿಂದ ಹಣ ಪಡೆಯುವ ಆಯ್ಕೆ ಲಭ್ಯವಿದೆ. ಒಂದು ಬಾರಿಗೆ 5000 ರೂ.ವರೆಗೆ ಹಣ ಪಡೆಯಬಹುದು. ದಿನಕ್ಕೆ ಎರಡು ಬಾರಿ ಹಣ ಪಡೆದುಕೊಳ್ಳಲು ಅವಕಾಶವಿದೆ ಎಂದು ಹೇಳಲಾಗಿದೆ.