ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಇನ್ನು ಮುಂದೆ ಬ್ಯಾಂಕ್ ಖಾತೆಗೆ ನಗದು ಜಮೆ ಮಾಡಲು ಕೂಡ ಶುಲ್ಕ ಪಾವತಿಸಬೇಕಿದೆ. ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡುವ ನೆಪದಲ್ಲಿ ಗ್ರಾಹಕರಿಗೆ ಬರೆ ಎಳೆಯಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಉಳಿತಾಯ, ಚಾಲ್ತಿ ಖಾತೆಗೂ ನಿಯಮ ಅನ್ವಯವಾಗಲಿದೆ. ಕೊರೊನಾ ಸಂಕಷ್ಟದ ನಡುವೆ ಜನರಿಗೆ ಮತ್ತೊಂದು ಬರೆ ಎಳೆಯಲಾಗಿದೆ. ಖಾತೆಗೆ ನೀವು ಹಣ ಕಟ್ಟಿದ್ದರೂ ಕೂಡ ಶುಲ್ಕ ಪಾವತಿಸಬೇಕಿದೆ. ಬ್ಯಾಂಕುಗಳು ನಿಗದಿಪಡಿಸಿದ ಮೂರು ಇಲ್ಲವೇ ಐದು ವ್ಯವಹಾರಗಳು ಉಚಿತವಾಗಿದ್ದು, ಬಳಿಕ ಹಣ ಪಾವತಿಸಲು ಕೂಡ ಶುಲ್ಕ ಪಾವತಿಸಬೇಕಾಗುತ್ತದೆ.
ಬ್ಯಾಂಕ್ ಆಫ್ ಬರೋಡಾ ಮೆಟ್ರೋ ನಗರಗಳಲ್ಲಿ ಉಳಿತಾಯ ಖಾತೆದಾರರಿಗೆ ಪ್ರತಿ ತಿಂಗಳು ಮೂರು ಸಲ ಉಚಿತವಾಗಿ ನಗದು ಠೇವಣಿ ಇಡಲು ಅವಕಾಶ ಕಲ್ಪಿಸಿದ್ದು ನಂತರ ಪ್ರತಿ ವರ್ಗಾವಣೆಗೆ 50 ರೂಪಾಯಿ ಶುಲ್ಕ ಪಾವತಿಸಬೇಕು. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಹಿರಿಯ ನಾಗರಿಕರಿಗೆ 40 ರೂ. ಶುಲ್ಕ ನಿಗದಿ ಮಾಡಿದೆ.
ಅದೇ ರೀತಿ ಬ್ಯಾಂಕ್ ಆಫ್ ಬರೋಡಾದಲ್ಲಿ ಚಾಲ್ತಿ ಖಾತೆದಾರರು ತಿಂಗಳಿಗೆ 3 ಸಲ ಉಚಿತವಾಗಿ ನಗದು ಪಡೆಯಬಹುದಾಗಿದ್ದು, ನಂತರ ಪ್ರತಿ ವರ್ಗಾವಣೆಗೆ 150 ರೂ. ಶುಲ್ಕವಾಗುತ್ತದೆ ಎನ್ನಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 5 ನಗದು ಜಮಾವಣೆ ಉಚಿತವಾಗಿರುತ್ತವೆ. ನಂತರದ ವ್ಯವಹಾರಕ್ಕೆ 25 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಕೆನರಾ ಬ್ಯಾಂಕ್ ನಲ್ಲಿ 50 ಸಾವಿರ ರೂಪಾಯಿಯವರೆಗೆ ಪ್ರತಿ ತಿಂಗಳು ಮೂರು ಸಲ ಉಚಿತವಾಗಿ ನಗದು ಠೇವಣಿ ಇಡಬಹುದು. ನಂತರ 1000 ರೂಪಾಯಿಗೆ ಒಂದು ರೂಪಾಯಿಯಂತೆ ಕನಿಷ್ಠ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಜನ್ ಧನ್ ಖಾತೆದಾರರಿಗೆ ಮತ್ತು ಬೇಸಿಕ್ ಸೇವಿಂಗ್ಸ್ ಖಾತೆ ಹೊಂದಿದವರಿಗೆ ಶುಲ್ಕ ಇರುವುದಿಲ್ಲ. ಅಕ್ರಮಗಳಿಗೆ ಕಡಿವಾಣ ಹಾಕಲು, ಆನ್ಲೈನ್ ವ್ಯವಹಾರಕ್ಕೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗಳಿಂದ ಗ್ರಾಹಕರು ನಗದು ಹಿಂಪಡೆದರೂ ನಿರ್ದಿಷ್ಟ ಮಿತಿ ನಂತರ ಸೇವಾ ಶುಲ್ಕ ಪಾವತಿಸಬೇಕು ಎಂದು ಹೇಳಲಾಗಿದೆ.