ಮುಂಬೈ: ಕೆವೈಸಿ ಅಪ್ಡೇಟ್ ಪ್ರಕ್ರಿಯೆ ಪೂರ್ಣಗೊಳ್ಳದಿರುವ ಸಂದರ್ಭದಲ್ಲಿ ಗ್ರಾಹಕರಿಗೆ ಒದಗಿಸುವ ಸೇವೆಗಳನ್ನು ಸ್ಥಗಿತಗೊಳಿಸಬಾರದು ಎಂಬುದು ಸೇರಿದಂತೆ ಬ್ಯಾಂಕ್ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಕುರಿತಾದ ಹಲವು ಶಿಫಾರಸ್ಸು ಗಳನ್ನು ಆರ್‌ಬಿಐಗೆ ತಜ್ಞರ ಸಮಿತಿ ಸಲ್ಲಿಸಿದೆ.
ಆರ್.ಬಿ.ಐ. ನೇಮಕ ಮಾಡಿದ್ದ ತಜ್ಞರ ಸಮಿತಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತರಬೇಕಾದ ಕೆಲವು ಶಿಫಾರಸು ಮಾಡಿದೆ. ಸಾಲ ಮರುಪಾವತಿ ಪೂರ್ಣಗೊಂಡ ನಂತರ ಗ್ರಾಹಕರಿಗೆ ಅವರ ಆಸ್ತಿಯ ದಾಖಲೆಗಳನ್ನು ಕಾಲಮಿತಿಯಲ್ಲಿ ವಾಪಸ್ ನೀಡಬೇಕು. ಇಲ್ಲದಿದ್ದರೆ ಹಣಕಾಸು ಸಂಸ್ಥೆಗಳಿಗೆ ದಂಡ ವಿಧಿಸಬೇಕು ಎಂದು ಹೇಳಲಾಗಿದೆ.
ಆಸ್ತಿ ದಾಖಲೆಗಳನ್ನು ಹಣಕಾಸು ಸಂಸ್ಥೆ ಕಳೆದು ಹಾಕಿದ ಸಂದರ್ಭದಲ್ಲಿ ಅದರ ಪ್ರಮಾಣಿಕೃತ ಹೊಸ ಪ್ರತಿ ಪಡೆದುಕೊಳ್ಳಲು ಗ್ರಾಹಕರಿಗೆ ತನ್ನ ಖರ್ಚಿನಲ್ಲಿ ನೆರವು ನೀಡಬೇಕು. ಗ್ರಾಹಕರಿಗೆ ಪರಿಹಾರ ಕೊಡಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.
ದೂರು ದಾಖಲಿಸಲು ಸಮಗ್ರ ಪೋರ್ಟಲ್ ಆರಂಭವಾಗುವವರೆಗೆ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ತಮ್ಮ ದೂರಿನ ಸ್ಥಿತಿ ತಿಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕು. ಪಿಂಚಣಿ ಪಡೆಯುವವರು ಜೀವಿತ ಪ್ರಮಾಣ ಪತ್ರವನ್ನು ಪಿಂಚಣಿ ಖಾತೆ ಇರುವ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಸಲ್ಲಿಸುವ ಅವಕಾಶ ನೀಡಬೇಕು ಎಂದು ಹೇಳಲಾಗಿದೆ.
ಆರ್‌ಬಿಐ ನಿಯಂತ್ರಕ್ಕೆ ಒಳಪಡುವ ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕ ಸೇವೆಗಳ ಬಗ್ಗೆ ಪರಿಶೀಲನೆಗಾಗಿ ಕಳೆದ ವರ್ಷ ಮೇನಲ್ಲಿ ಆರ್‌ಬಿಐ ತಜ್ಞರ ಸಮಿತಿ ರಚಿಸಿದ್ದು, ಈ ಸಮಿತಿ ಬ್ಯಾಂಕ್ ಗ್ರಾಹಕರಿಗೆ ಕಲ್ಪಿಸಬೇಕಿರುವ ಅನುಕೂಲಗಳ ಬಗ್ಗೆ ವರದಿ ನೀಡಿದೆ.